ಶ್ರೀಪಾದ ಶ್ರಿವಲ್ಲಭರ ಚರಿತಾಮೃತಾ Sripada Srivallabara Charitamruta
179 subscribers
5 photos
3 files
122 links
Download Telegram
ಶ್ರೀಪಾದ ಶ್ರೀವಲ್ಲಭರ ಚರಿತಾಮೃತ
Episode 400
ಜಯ ಶ್ರೀ ಗುರು ದೇವ ದತ್ತ!!

೪೦೦. ಸಮಸ್ತ ಜೀವರಾಶಿಗಳಲ್ಲಿರುವ ಅಗ್ನಿ ಸ್ವರೂಪನು ನಾನೇ! ಎಲ್ಲವನ್ನೂ ಪವಿತ್ರೀಕರಿಸುತ್ತಿರುವವನು ನಾನೇ! ಎಲ್ಲವುಗಳನ್ನೂ ದಗ್ಧ ಮಾಡುತ್ತಿರುವವನು ಕೂಡ ನಾನೇ!
ಶ್ರೀ ಶಂಕರ ಭಟ್ಟರ ಶ್ರೀಪಾದ ಶ್ರೀವಲ್ಲಭ ದಿವ್ಯ ಚರಿತಾಮೃತದ ನಾಲ್ವತ್ತೊಂಭತ್ತನೇ ಅಧ್ಯಾಯ ಪ್ರಾರಂಭ
(ಇಲ್ಲಿಯವರೆಗೆ : ಶ್ರೀಪಾದ ಶ್ರೀವಲ್ಲಭರು, ತಮ್ಮ ಈ ಅವತಾರದ ಲಾಭ ತೆಗೆದುಕೊಂಡು, ಪಾಪಮುಕ್ತರಾಗಿ ಎಲ್ಲರೂ ತಮ್ಮನ್ನು ಉದ್ಧರಿಸಿಕೊಳ್ಳಬೇಕೆಂದು ತನ್ನ ಭಕ್ತರಿಗೆ ಹೇಳುತ್ತಿದ್ದರಲ್ಲದೇ, ಯಾವ ಗುರುಗಳಿಗೆ ನಮಸ್ಕಾರ ಮಾಡಿದರೂ ಕೊನೆಗೆ ಆದಿಗುರುವಾದ ತನಗೇ ತಲುಪುವದೆಂದೂ, ಅದೇ ರೀತಿ ಯಾರನ್ನೇ ದ್ವೇಷಿಸಿದರೂ ಅದೂ ಕೂಡ ತನ್ನನ್ನೇ ತಲುಪುವದೆಂದು ಹೇಳಿ, ತಮ್ಮ ದರುಶನ ಮಾತ್ರದಿಂದ ಮಹಾಪಾತಕಗಳು ನಾಶವಾಗುತ್ತವೆಯೆಂದೂ, ಹೃದಯದಲ್ಲಿ ಭಗವನ್ನಾಮವನ್ನಿಟ್ಟುಕೊಂಡು, ಧರ್ಮಸಮ್ಮತ ಕರ್ಮಗಳನ್ನು ಮಾಡಿದರೆ ಶುಭಫಲಗಳನ್ನು ಪಡೆಯುವಿರೆಂದೂ ಹೇಳುತ್ತಿದ್ದರೆಂದು ಶಂಕರಭಟ್ಟರು ವಿವರಿಸಿ, ಶ್ರೀಪಾದರ ದಿವ್ಯ ವಚನಗಳನ್ನು ಅನುಸರಿಸಿ ಜೀವನವನ್ನು ನಡೆಸಿದರೆ ನಮ್ಮ ಜನ್ಮ ಸಾರ್ಥಕವಾಗುವದು, ಎಂದು ಹೇಳಿ ಶ್ರೀಪಾದರ ನಿತ್ಯ ಕಾರ್ಯಕ್ರಮದ ನಿರೂಪಣೆ ಮುಗಿಸಿದರು.)
ಶ್ರೀಪಾದರಾಜಂ ಶರಣಂ ಪ್ರಪದ್ಯೇ
ಜಯವಾಗಲಿ ಜಯವಾಗಲಿ ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ

ಶ್ರೀಪಾದರು ಕರ್ಮ ವಿಧ್ವಂಸ ಮಾಡುವ ವಿಧಾನಗಳು - ೩೩ ಸಂಖ್ಯೆಯ ವಿಶೇಷ, ಕುರುಗಡ್ಡೆಯಲ್ಲಿ ಅವರ ಕಾರ್ಯಕ್ರಮಗಳು :
ಶ್ರೀಪಾದರು ಒಮ್ಮೆ, ‘ಶಂಕರಭಟ್ಟ! ನಾವು ಅನುಷ್ಠಾನ ಮಾಡುವದು ಅಗ್ನಿ ವಿದ್ಯೆ. ಅಗ್ನಿ ಉಪಾಸನೆ ಮಾಡುವದು ಶ್ರೋತ್ರೀಯ ಲಕ್ಷಣ. ನಿನ್ನ ಅಗ್ನಿ ಉಪಾಸನೆ ಹರಿಒಲೆ ಹತ್ತಿಸಿ ಅಡಿಗೆ ಮಾಡುವದೇ!’ ಎಂದು ಹೇಳಿದರು. ಆಗ ನಾನು ಶ್ರೀಪಾದರೊಡನೆ, ‘ಮಹಾಗುರುಗಳಿಗೆ ಜಯವಾಗಲಿ! ನನ್ನ ನಂತರವೂ ಈ ಹರಿ ಒಲೆ ಹೀಗೆಯೇ ಉರಿಯುತ್ತಿರಲಿ’ ಎಂದು ಹೇಳಿದೆನು. ಅದಕ್ಕೆ ಅವರು, ‘ನಿನ್ನ ಹರಿಒಲೆಗೆ ಸ್ವತಃ ಶಕ್ತಿ ಇಲ್ಲ. ನನ್ನ ಯೋಗಾಗ್ನಿ ಸೇರುವದರಿಂದ ಆ ಒಲೆಯ ಮೇಲೆ ನೀನು ಮಾಡುವ ಅಡಿಗೆ ಪ್ರಸಾದ ರೂಪವಾಗಿ ಪರಿವರ್ತನೆ ಹೊಂದಿ ಭಕ್ತರ ದೈನ್ಯತೆಯನ್ನು ಹೀನ ಗುಣಗಳನ್ನೂ ಹೋಗಲಾಡಿಸುತ್ತದೆ. ಈ ಹರಿಒಲೆ ಇನ್ನು ಒಂಭತ್ತು ವರ್ಷಗಳು ಮಾತ್ರ ಉರಿಯಬೇಕಾಗಿದೆ. ಅಂದರೆ ನನ್ನ ಮೂವತ್ತನೆಯ ವರ್ಷದಲ್ಲಿ ನಾನು ನನ್ನ ಶರೀರವನ್ನು ಗುಪ್ತವಾಗಿಸುವೆನು. ಅನಂತರ ಮೂರು ವರ್ಷಗಳು ತೇಜೋಮಯ ಶ್ರದ್ಧಾಳು ಭಕ್ತರಿಗೆ ದರ್ಶನವನ್ನು ಕೊಡುತ್ತೇನೆ. ಅಲ್ಲಿಗೆ ನನ್ನ ವಯಸ್ಸು ೩೩ ವರ್ಷಗಳಾಗುತ್ತವೆ. ಯೋಗಿಗಳ ಜೀವಿತದಲ್ಲಿ ೩೩ನೇ ವರ್ಷವು ಅನೇಕ ಮಾರ್ಪಾಟುಗಳನ್ನು ತರುವ ಸಂವತ್ಸರವು. ಬೆನ್ನು ಮೂಳೆಯಲ್ಲಿರುವ ಮೂಳೆಗಳು ಮತ್ತು ಕೀಲುಗಳು ಕೂಡ ೩೩. ರುದ್ರಗಣಗಳ ಸಂಖ್ಯೆ ೩೩ ಕೋಟಿ. ಆನಂತರವೂ ನಮ್ಮ ಅಗ್ನಿ ಯಜ್ಞವು ಮುಂದುವರಿಯುತ್ತದೆ. ಕರ್ಮಗಳನ್ನು ಸ್ಥೂಲರೂಪಕ್ಕೆ ತಂದು ದಹಿಸಲು ಪ್ರತೀಕವಾಗಿ ನಾನು ಅಗ್ನಿ ಯಜ್ಞವನ್ನು ಮಾಡುತ್ತಿದ್ದೇನೆ. ಆದರೆ ಭಕ್ತರ ಕರ್ಮಗಳು ಸ್ಥೂಲ ರೂಪಕ್ಕೆ ಬರುವ ಮುನ್ನ ಸೂಕ್ಷ್ಮರೂಪದಲ್ಲಿರುತ್ತದೆ. ಅದಕ್ಕೂ ಮೊದಲು ಕಾರಣರೂಪವಾದ ಕಾರಣಶರೀರದಲ್ಲಿರುತ್ತದೆ. ಆದ್ದರಿಂದ ೩೩ನೆಯ ವರ್ಷ ಆದ ತರುವಾಯ ಈ ವಿಧವಾದ ಅಗ್ನಿಪೂಜೆಯು ನನಗೆ ಅವಶ್ಯಕತೆಯಿಲ್ಲ. ಆಗ ನನ್ನನ್ನು ಆಶ್ರಯಿಸಿದ ಭಕ್ತರ ಕಾರಣ ಶರೀರದಲ್ಲಿರುವ, ಸೂಕ್ಷ್ಮಶರೀರದಲ್ಲಿರುವ, ಸ್ಥೂಲಶರೀರದಲ್ಲಿರುವ ಪಾಪಕರ್ಮಗಳನ್ನು ನನ್ನ ಯೋಗಾಗ್ನಿಯಿಂದ ದಗ್ಧ ಮಾಡುತ್ತೇನೆ. ನೀನು ಮಾತ್ರ ನಾನು ೩೦ನೇ ವರ್ಷ ತಲುಪುವವರೆಗೆ ನನ್ನ ಹರಿಒಲೆಯನ್ನು ಉರಿಸುತ್ತಲೇ ಇರು. ಅನಂತರ ನನ್ನ ಭಕ್ತರು ಬಂದು ಅವರವರ ಅಡಿಗೆಗಳನ್ನು ಮಾಡಿಕೊಂಡು ಹೋಗುತ್ತಾರೆ. ಅದು ಮೂರು ವರ್ಷಗಳು ನಡೆಯುತ್ತವೆ. ಆ ತರುವಾಯ ಸ್ಥೂಲರೂಪದಲ್ಲಿರುವ ಈ ಅಗ್ನಿ ಪೂಜೆಯ ಅವಶ್ಯಕತೆಯೇ ಇರುವದಿಲ್ಲ. ಪೃಥ್ವಿಯಜ್ಞವನ್ನು ಪ್ರಾರಂಭಿಸಿದ್ದೇನೆ. ದಿಗ್ವಿಜಯವಾಗಿ ನಡೆಯುತ್ತಿದೆ. ಜಲಯಜ್ಞವನ್ನು ಪ್ರಾರಂಭಿಸಿದ್ದೇನೆ. ಅದು ಕೂಡ ಬ್ರಹ್ಮಾಂಡವಾಗಿ ಸಾಗುತ್ತಿದೆ. ಈಗ ಅಗ್ನಿ ಪೂಜೆಯನ್ನು ಅಗ್ನಿ ಯಜ್ಞವಾಗಿ ಪ್ರಾರಂಭಿಸಿದ್ದೇನೆ. ಇದು ಕೂಡ ಅಡೆತಡೆಗಳಿಲ್ಲದೆ ಸಾಗುವದು. ಸಮಸ್ತ ಜೀವರಾಶಿಗಳಲ್ಲಿರುವ ಅಗ್ನಿ ಸ್ವರೂಪನು ನಾನೇ! ಎಲ್ಲವನ್ನೂ ಪವಿತ್ರೀಕರಿಸುತ್ತಿರುವವನು ನಾನೇ! ಎಲ್ಲವುಗಳನ್ನೂ ದಗ್ಧ ಮಾಡುತ್ತಿರುವವನು ಕೂಡ ನಾನೇ!
ಪಂಚತತ್ತ್ವಗಳಿಗೆ ಸಂಬಂಧಿಸಿದ ಯಜ್ಞಗಳ ವಿಚಾರವಾಗಿ ನಾನು ಎಂದೂ ಕೇಳಿರಲಿಲ್ಲ. ಶ್ರೀಪಾದರ ಲೀಲಾ ವಿಧಾನವನ್ನು ಕುರಿತು ಆಲೋಚಿಸುವದು ವ್ಯರ್ಥವೆಂಬ ನಿರ್ಣಯಕ್ಕೆ ಬಂದೆನು. ಒಂದು ಸಲ ನವದಂಪತಿಗಳು ಶ್ರೀಪಾದರ ದರ್ಶನಾರ್ಥವಾಗಿ ಬಂದರು. ಅವರಿಬ್ಬರನ್ನೂ ಪಂಚದೇವ ಪಹಾಡನಲ್ಲಿ ತನ್ನ ದರ್ಬಾರಿನಲ್ಲಿ ಇರಲು ಹೇಳಿದರು. ಎರಡು ದಿನಗಳಿಗೆ ಆ ಯುವಕನು ಮರಣಿಸಿದನು. ಅವರು ಮಹಾಗುರುಗಳು ತಮ್ಮನ್ನು ರಕ್ಷಿಸುವರೆಂದು, ಎಷ್ಟೋ ವರಗಳನ್ನು ಕೊಡುವ ಶ್ರೇಷ್ಠ ದೈವವೆಂದು ನಂಬಿದ್ದರು. ಆದರೆ ಪರಮ ದುಸ್ಸಹವಾದ ವೈಧವ್ಯವು ನವವಧುವಿಗೆ ಪ್ರಾಪ್ತವಾಯಿತು. ಆ ನವದಂಪತಿಗಳ ಬಂಧುಗಳು ಪಂಚದೇವ ಪಹಾಡಿಗೆ ಬಂದರು. ಶವವನ್ನು ದಹಿಸಬೇಕೇ ಬೇಡವೇ ಎನ್ನುವ ವಿಷಯದಲ್ಲಿ ಸಂದಿಗ್ಧದಲ್ಲಿ ಬಿದ್ದರು. ಶ್ರೀಪಾದವಲ್ಲಭರ ಆಜ್ಞೆಯಿಲ್ಲದೆ ಶವವನ್ನು ಪಂಚದೇವ ಪಹಾಡನಲ್ಲಿನ ಅವರ ದರ್ಬಾರಿನಿಂದ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಆ ನವವಧುವು ಶೋಕದೇವತೆಯಾಗಿ ಇದ್ದಳು. ಶ್ರೀಪಾದರು ತಮ್ಮ ದರ್ಬಾರಿಗೆ ಬಂದರು. ಅವರಿಗೆ ನವವಧುವು ತನ್ನ ದೌರ್ಭಾಗ್ಯವನ್ನು ತಿಳಿಸಿದಳು. ಶ್ರೀಪಾದರು ಕರ್ಮಫಲಿತಗಳು ಅನಿವಾರ್ಯವೆಂದರು. ಆಗ ಆ ನವವಧುವು, ‘ಜಡಕರ್ಮಕ್ಕೆ ನಿಜವಾಗಿ ನನ್ನ ಪತಿಗೆ ಸಾವನ್ನುಂಟುಮಾಡುವ ಶಕ್ತಿಯು ಇರುವದಾದರೆ ಕರ್ಮಕ್ಕೇ ದೇವತಾಸ್ಥಾನವನ್ನು ಕೊಟ್ಟು ಆಲಯವನ್ನು ಕಟ್ಟಿ ಪೂಜಿಸುವದೇ ಮೇಲು. ನೀವು ಚೈತನ್ಯ ಸ್ವರೂಪರು, ಅಗ್ನಿ ವಸ್ತ್ರಧಾರಿಗಳು, ಅಗ್ನಿ ರೂಪರು. ನಿಮಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂದು ಕೇಳಿದ್ದೆನು. ಈ ಅಭಾಗ್ಯಳಿಗೆ ಮಾಂಗಲ್ಯ ಭಿಕ್ಷೆಯನ್ನು ಕೊಟ್ಟು ಧನ್ಯಳನ್ನಾಗಿ ಮಾಡಬೇಕು’ ಎಂದು ಪ್ರಾರ್ಥಸಿದಳು. ಆ ನವ ವಧುವಿಗೆ ಶ್ರೀಪಾದರ ದಯೆಯ ಮೇಲೆಯೂ, ಕಾರುಣ್ಯದ ಮೇಲೆಯೂ ಸಂಪೂರ್ಣ ನಂಬಿಕೆ.
(ಮುಂದುವರಿಯುವದು)
ಪ್ರಭಾ ಭಟ್ಟ, ಪುಣೆ

https://t.me/SSCJSGD
ಶ್ರೀಪಾದ ಶ್ರೀವಲ್ಲಭರ ಚರಿತಾಮೃತ
Episode 401
ಜಯ ಶ್ರೀ ಗುರು ದೇವ ದತ್ತ!!

೪೦೧. ಒಬ್ಬ ಭಕ್ತನು ಪರಮನಿರ್ಭಾಗ್ಯ ಸ್ಥಿತಿಯಲ್ಲಿದ್ದನು. ಆಗ ಶ್ರೀಪಾದರು ಅವರ ಮನೆಯಲ್ಲಿ ಒಂದು ವಾರ ಹಸುವಿನ ತುಪ್ಪದಿಂದ ಅಖಂಡವಾಗಿ ದೀಪವನ್ನು ಬೆಳಗಿಸಿದರೆ ಮತ್ತೆ ಆ ಮನೆಯಲ್ಲಿ ಲಕ್ಷ್ಮಿ ಕಳೆ ಪ್ರವೇಶಿಸುವದೆಂದು ತಿಳಿಸಿದರು.
ಶ್ರೀ ಶಂಕರ ಭಟ್ಟರ ಶ್ರೀಪಾದ ಶ್ರೀವಲ್ಲಭ ದಿವ್ಯ ಚರಿತಾಮೃತದ ನಾಲ್ವತ್ತೊಂಭತ್ತನೇ ಅಧ್ಯಾಯದ ಕೊನೆಯ ಭಾಗ
(ಇಲ್ಲಿಯವರೆಗೆ : ಶ್ರೀಪಾದ ಶ್ರೀವಲ್ಲಭರು, ಅಗ್ನಿಯಜ್ಞದ ಗೂಢಗಳನ್ನು ಶಂಕರಭಟ್ಟರಿಗೆ ತಿಳಿಸುತ್ತ, ಪಂಚತತ್ತ್ವಗಳ ಯಜ್ಞ ವಿಚಾರ ಹೇಳಿ, ‘ಸಮಸ್ತ ಜೀವರಾಶಿಗಳಲ್ಲಿರುವ ಅಗ್ನಿ ಸ್ವರೂಪನು ನಾನೇ! ಎಲ್ಲವನ್ನೂ ಪವಿತ್ರೀಕರಿಸುತ್ತಿರುವವನು ನಾನೇ! ಎಲ್ಲವುಗಳನ್ನೂ ದಗ್ಧ ಮಾಡುತ್ತಿರುವವನು ಕೂಡ ನಾನೇ!’ ಎಂದು ಘೋಷಿಸಿದರು. ನಂತರ ಶಂಕರಭಟ್ಟರು, ಪಂಚದೇವ ಪಹಾಡಿನ ಶ್ರೀಪಾದರ ದರ್ಬಾರಿಗೆ ಬಂದ ನವದಂಪತಿಗಳ ಪ್ರಸಂಗ ವರ್ಣಿಸುತ್ತಾ, ಅವರು ಅಲ್ಲಿರುವಾಗ ಆಕೆಯ ಪತಿ ಅಕಸ್ಮಾತ್ ಮರಣಿಸಲು, ಆ ವಧು, ಕರ್ಮಕ್ಕಿಂತ ಚೈತನ್ಯವೇ ಶಕ್ತಿಶಾಲಿಯಾಗಿರುವಾಗ, ಶ್ರೀಪಾದರಿಗೆ ಅಸಾಧ್ಯವಾದುದ್ದೇನೂ ಇಲ್ಲವೆಂದು ಹೇಳಿ, ಶ್ರೀಪಾದರಲ್ಲಿ ತನ್ನ ಮಾಂಗಲ್ಯ ಭಿಕ್ಷೆಯನ್ನು ಕೊಟ್ಟು ಧನ್ಯಳನ್ನಾಗಿ ಮಾಡಬೇಕೆಂದು ಕೇಳಿಕೊಂಡಳು, ಎಂದು ಹೇಳಿದರು.)

ಸತ್ತವರಿಗೆ ಜೀವದಾನ :
ಆಗ ಶ್ರೀಪಾದರು, ‘ವಿಶ್ವಾಸೋ ಫಲದಾಯಕಂ’ ‘ನನ್ನಲ್ಲಿ ನಿನಗೆ ಅಷ್ಟು ದೃಢವಾದ ನಂಬಿಕೆಯಿದ್ದರೆ ನಿನ್ನ ಪತಿ ಖಂಡಿತವಾಗಿ ಸಜೀವನಾಗುವನು. ಆದರೆ ಕರ್ಮ ಸಿದ್ಧಾಂತಕ್ಕೆ ವಿರೋಧವಾಗದಂತಹ ಉಪಾಯವನ್ನು ಹೇಳುತ್ತೇನೆ. ನಿನ್ನ ಮಂಗಳಸೂತ್ರವನ್ನು ಮಾರಿ ನಿನ್ನ ಪತಿಯ ಭಾರಕ್ಕೆ ಸಮಾನ ಭಾರದ ಕಟ್ಟಿಗೆಗಳನ್ನು ತಂದುಕೊಡು. ಆ ಕಟ್ಟಿಗೆಗಳನ್ನು ಹರಿಒಲೆಗೆ ಹಾಕಿ ಅಡಿಗೆ ಮಾಡುತ್ತೇವೆ. ನೀನು ಮಾಂಗಲ್ಯವನ್ನು ಕಳೆದುಕೊಳ್ಳುವಷ್ಟು ಅಮಾಂಗಲ್ಯವು, ಕಟ್ಟಿಗೆಯ ಉರಿಯಿಂದ ನಿನ್ನ ಪತಿಯ ಶರೀರವು ದಗ್ಧವಾಗುವ ಅಮಾಂಗಲ್ಯವು, ಎಲ್ಲವೂ ಕೂಡ ಶಾಂತವಾಗುವವು’ ಎಂದು ನುಡಿದರು. ಆಗ ಆಕೆ ಹಾಗೆಯೇ ಮಾಡಿದುದರಿಂದ ಆಕೆಯ ಪತಿಯು ಬದುಕಿದನು.
ಶ್ರೀಪಾದರು ತಮ್ಮ ಭಕ್ತರ ವಿಧವಿಧವಾದ ಪಾಪಕರ್ಮಗಳನ್ನು ಕಟ್ಟಿಗೆಗಳಿಗೆ ಆಕರ್ಷಿಸುತ್ತಿದ್ದರು. ಆ ರೀತಿ ಮಾಡುವದರಿಂದ ಆ ಕಟ್ಟಿಗೆಗಳು ಹರಿ ಒಲೆಯಲ್ಲಿ ಉರಿದು ರುಚಿಕರವಾದ ಅಡಿಗೆಗಳು ತಯಾರಾಗಿ ಪ್ರಸಾದ ರೂಪವಾದ ಶುಭ ಫಲಗಳನ್ನು ಕೊಡುತ್ತಿದ್ದವು.
ದರಿದ್ರ ಬ್ರಾಹ್ಮಣನ ಮೇಲೆ ವಿಶೇಷ ಅನುಗ್ರಹ :
ಮತ್ತೊಮ್ಮೆ ಒಬ್ಬ ಬಡ ಬ್ರಾಹ್ಮಣನು ಶ್ರೀಪಾದರ ದರ್ಶನಾರ್ಥವಾಗಿ ಬಂದನು. ಶ್ರೀಪಾದರು ತನ್ನನ್ನು ಕರುಣಿಸದೇ ಹೋದರೆ ಆತ್ಮಹತ್ಯೆಯೇ ಗತಿಯೆಂದು ತನ್ನ ಗೋಳನ್ನು ತೋಡಿಕೊಂಡನು. ಆಗ ಶ್ರೀಪಾದರು ಉರಿಯುತ್ತಿರುವ ಕೊಳ್ಳಿಯನ್ನು ತಂದು ಆ ಬ್ರಾಹ್ಮಣನಿಗೆ ತಾಕಿಸಿದರು. ಆ ಬ್ರಾಹ್ಮಣನು ಬಹಳ ಹೊತ್ತಿನವರೆಗೂ ಬಾಧೆ ಪಟ್ಟನು. ‘ಎಲವೋ ಬ್ರಾಹ್ಮಣ! ನೀನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಇದ್ದೆ. ನಾನು ನಿನ್ನ ಮೇಲೆ ದಯೆ ತೋರದಿದ್ದರೆ, ಕರುಣಿಸದಿದ್ದರೆ ನಿಜವಾಗಿಯೂ ನೀನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ. ಆ ಆತ್ಮಹತ್ಯೆಗೆ ಸಂಬಂಧಿಸಿರುವ ಸಮಸ್ತ ಪಾಪಕರ್ಮಗಳ ಸ್ಪಂದನಗಳನ್ನು ಈ ಉರಿಯುತ್ತಿರುವ ಕೊಳ್ಳಿಯನ್ನು ನಿನಗೆ ತಾಕಿಸುವ ಮೂಲಕ ನಾಶಪಡಿಸಿದೆನು. ಇನ್ನು ಮೇಲೆ ನಿನಗೆ ದಾರಿದ್ರ್ಯದ ಬಾಧೆ ಇರುವದಿಲ್ಲ. ಈ ತಣ್ಣಗಾದ ಕೊಳ್ಳಿಯನ್ನು ನೀನು ನಿನ್ನ ಮಡಿಪಂಚೆಯಲ್ಲಿ ಸುತ್ತಿಕೊಂಡು ಜಾಗ್ರತೆಯಾಗಿ ನಿನ್ನ ಮನೆಗೆ ತೆಗೆದುಕೊಂಡು ಹೋಗು’ ಎಂದರು. ಆತನು ಹಾಗೆಯೇ ಮಾಡಿದನು. ಮನೆಗೆ ಹೋಗಿ ಆ ಗಂಟನ್ನು ಬಿಚ್ಚಿದಾಗ ಅದು ಬಂಗಾರವಾಯಿತು. ಅವನ ದಾರಿದ್ರ್ಯವು ತೀರಿತು.
ಶ್ರೀಪಾದರು ತಮ್ಮ ಅಗ್ನಿ ಯಜ್ಞದ ಮುಖಾಂತರ ಬಹಳ ವಿಚಿತ್ರ ರೀತಿಯಲ್ಲಿ ತಮ್ಮ ಭಕ್ತರ ಪಾಪಕರ್ಮಗಳನ್ನು ಧ್ವಂಸ ಮಾಡುತ್ತಿದ್ದರು. ಒಮ್ಮೊಮ್ಮೆ ತನ್ನ ಭಕ್ತರಿಗೆ ಯಾವುದಾದರೂ ಕಾಯಿಪಲ್ಯವನ್ನು ಎಂದರೆ ಬೆಂಡೆಕಾಯಿ, ಬದನೇಕಾಯಿಗಳನ್ನು ತಂದುಕೊಡು, ಎಂದು ಹೇಳುತ್ತಿದ್ದರು. ಆ ಕಾಯಿಪಲ್ಯೆಯಲ್ಲಿ ಆ ಭಕ್ತನ ಪಾಪಕರ್ಮರೂಪ ಸ್ಪಂದನಗಳನ್ನು ಆಕರ್ಷಿಸುತ್ತಿದ್ದರು. ಆ ಕಾಯಿಪಲ್ಯೆಯ ಅಡಿಗೆಯನ್ನು ಭಕ್ತರಿಗೆ ಪ್ರಸಾದವಾಗಿ ಬಡಿಸುತ್ತಿದ್ದರು. ಇದರ ಮೂಲಕ ಭಕ್ತರ ಪಾಪಕರ್ಮ ದೋಷಗಳನ್ನು ನಾಶ ಪಡಿಸುವರು.
ಒಂದು ಹುಡುಗಿಗೆ ರಜಸ್ವಲೆಯಾದರೂ ವಿವಾಹವಾಗಲಿಲ್ಲ. ಆಕೆಗೆ ಕುಜದೋಷವಿದೆಯೆಂದು ಗ್ರಹಿಸಿ ಅವಳ ಕೈಯಲ್ಲಿ ತೊಗರಿಬೇಳೆ ತರಿಸಿ, ಆ ಬೇಳೆಯಿಂದ ಅಡಿಗೆ ಮಾಡಿಸಿ ಎಲ್ಲ ಭಕ್ತರ ಜೊತೆಗೆ ಅವಳೂ ಅದನ್ನು ಪ್ರಸಾದವಾಗಿ ಸ್ವೀಕರಿಸುವಂತೆ ಮಾಡಿದರು. ಈ ವಿಧವಾಗಿ ಅವಳ ಕರ್ಮಬಂಧವು ತೀರಿಹೋಗಿ ಆ ಹುಡುಗಿಗೆ ಯೋಗ್ಯ ವರನೊಂದಿಗೆ ಮದುವೆಯಾಯಿತು.
ಕೆಲವರನ್ನು ದರ್ಬಾರು ಅಡಿಗೆಗೆ ಹಸುವಿನ ತುಪ್ಪವನ್ನು ತಂದುಕೊಡುವಂತೆ ಹೇಳುತ್ತಿದ್ದರು. ಇನ್ನು ಕೆಲವರಿಗೆ ಹಸುವಿನ ತುಪ್ಪಗಳಿಂದ ದೀಪವನ್ನು ಹಚ್ಚುವಂತೆ ಹೇಳುತ್ತಿದ್ದರು. ತುಂಬಾ ಕಷ್ಟಕರ ಪರಿಸ್ಥಿತಿಯು ಒದಗಿದಾಗ ಕನ್ಯೆಯರಿಗೆ ವಿವಾಹವಾಗದಾಗ, ರಾಹುಕಾಲದಲ್ಲಿ ಶುಕ್ರವಾರದ ದಿನ ಅಂಬಿಕೆಗೆ ಪೂಜೆ ಮಾಡುವಂತೆ ಹೇಳುತ್ತಿದ್ದರು.
ಒಂದು ಸಲ ಒಬ್ಬ ಭಕ್ತನು ಖಾಯಿಲೆ ಬಂದು ಹಾಸಿಗೆ ಹಿಡಿದನು. ಶ್ರೀಪಾದರು ಆತನು ಮಲಗುವ ಕೋಣೆಯಲ್ಲಿ ಅರಳೆಣ್ಣೆ ದೀಪ ಹಚ್ಚಿ ಅದು ರಾತ್ರಿಯೆಲ್ಲಾ ಸರಿಯಾಗಿ ಉರಿಯುವಂತೆ ನೋಡಿಕೊಳ್ಳಬೇಕು, ಎಂದರು. ಅವರು ಹಾಗೆ ಮಾಡಿದುದರಿಂದ ಆ ಭಕ್ತನು ರೋಗ ವಿಮುಕ್ತನಾದನು.
ಒಬ್ಬ ಭಕ್ತನು ಪರಮನಿರ್ಭಾಗ್ಯ ಸ್ಥಿತಿಯಲ್ಲಿದ್ದನು. ಆಗ ಶ್ರೀಪಾದರು ಅವರ ಮನೆಯಲ್ಲಿ ಒಂದು ವಾರ ಹಸುವಿನ ತುಪ್ಪದಿಂದ ಅಖಂಡವಾಗಿ ದೀಪವನ್ನು ಬೆಳಗಿಸಿದರೆ ಮತ್ತೆ ಆ ಮನೆಯಲ್ಲಿ ಲಕ್ಷ್ಮಿ ಕಳೆ ಪ್ರವೇಶಿಸುವದೆಂದು ತಿಳಿಸಿದರು. ಇಂತಹ ಎಷ್ಟೆಷ್ಟೋ ಪದ್ಧತಿಗಳ ಮೂಲಕ ತಮ್ಮ ಆಶ್ರಿತ ಭಕ್ತರನ್ನು ಪಾಪಕರ್ಮ ವಿಮುಕ್ತರನ್ನಾಗಿ ಮಾಡುತ್ತಿದ್ದರು. ಆ ಪದ್ಧತಿಗಳೆಲ್ಲವನ್ನೂ ತಿಳಿದು ಕೊಳ್ಳುವದಕ್ಕೆ ಮಾನವ ಮಾತ್ರನಿಗೆ ಸಾಧ್ಯವಾಗುವದಿಲ್ಲ.
ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ ಜಯವಾಗಲಿ
(ಮುಂದುವರಿಯುವದು)
ಪ್ರಭಾ ಭಟ್ಟ, ಪುಣೆ

https://t.me/SSCJSGD
ಶ್ರೀಪಾದ ಶ್ರೀವಲ್ಲಭರ ಚರಿತಾಮೃತ
Episode 402
ಜಯ ಶ್ರೀ ಗುರು ದೇವ ದತ್ತ!!

೪೦೨. ಯಾರೇ ಆಗಲಿ ‘ಶ್ರೀಪಾದವಲ್ಲಭ ದಿಗಂಬರ! ದತ್ತ ದಿಗಂಬರ!’ ಎಂದು ಮನಃಸ್ಫೂರ್ತಿಯಾಗಿ ನಾಮಸ್ಮರಣೆಯನ್ನು ಮಾಡಿದರೆ ಅವರಿಗೆ ನಾನು ಅತ್ಯಂತ ಸುಲಭಪ್ರಾಪ್ತನಾಗಿ ಶುಭಫಲಗಳನ್ನು ಉಂಟು ಮಾಡುತ್ತೇನೆ.
ಶ್ರೀ ಶಂಕರ ಭಟ್ಟರ ಶ್ರೀಪಾದ ಶ್ರೀವಲ್ಲಭ ದಿವ್ಯ ಚರಿತಾಮೃತದ ಐವತ್ತನೇ ಅಧ್ಯಾಯ ಪ್ರಾರಂಭ
ಇಲ್ಲಿಯವರೆಗೆ : ಆ ನವವಧುವಿನ ಪ್ರಸಂಗ ಮುಂದುವರಿಸುತ್ತ, ಶಂಕರಭಟ್ಟರು, ಶ್ರೀಪಾದವಲ್ಲಭರು, ಆಕೆಯ ಮಂಗಳಸೂತ್ರ ಮಾರಿ, ತಂದ ಕಟ್ಟಿಗೆ ಉರಿಸಿ, ಅಡಿಗೆ ಮಾಡಲಿಕ್ಕೆ ಹೇಳಿ, ಆ ಅಡಿಗೆಯನ್ನು ಪ್ರಸಾದರೂಪದಲ್ಲಿ, ಎಲ್ಲರೂ ಸ್ವೀಕರಿಸಿದಾಗ, ಆಕೆಯ ಸತ್ತ ಪತಿ ಜೀವಂತನಾದನು. ಅದೇ ರೀತಿ ಶ್ರೀಪಾದರು ವಿಲಕ್ಷಣ ಪದ್ಧತಿಗಳಿಂದ ಬಂದ ಅಸಂಖ್ಯ ಆಶ್ರಿತ ಭಕ್ತರನ್ನು ಪಾಪಕರ್ಮಗಳಿಂದ ವಿಮುಕ್ತ ಮಾಡಿ ಅನುಗ್ರಹಿಸುತ್ತಿದ್ದರು. ಆ ಪದ್ಧತಿಗಳೆಲ್ಲವನ್ನೂ ತಿಳಿದು ಕೊಳ್ಳುವದಕ್ಕೆ ಮಾನವ ಮಾತ್ರನಿಗೆ ಸಾಧ್ಯವಾಗುವದಿಲ್ಲ, ಎಂದು ಹೇಳಿ ಶಂಕರಭಟ್ಟರು ತಮ್ಮ ವಿವರಣೆ ಸಮಾಪ್ತ ಮಾಡಿದರು.
(ಐವತ್ತನೇ ಅಧ್ಯಾಯ ಪ್ರಾರಂಭ)
ಶ್ರೀಪಾದರಾಜಂ ಶರಣಂ ಪ್ರಪದ್ಯೇ
ಜಯವಾಗಲಿ ಜಯವಾಗಲಿ ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ

ಗುರುನಿಂದೆ ಮಾಡುವದರಿಂದ ಉಂಟಾಗುವ ದಾರಿದ್ರ್ಯವೇ ಮೊದಲಾದ ಶಾಪಗಳ ನಿವೃತ್ತಿ; ನಾಮಸ್ಮರಣ ಮಹಿಮೆ :
ಶ್ರೀಪಾದವಲ್ಲಭರು ಒಂದು ಸಲ ನನ್ನ ಹತ್ತಿರ, ‘ಶಂಕರಭಟ್ಟ! ನಮ್ಮ ಅಗ್ನಿ ಯಜ್ಞದ ತರುವಾಯ ಮುಖ್ಯವಾದದ್ದು ವಾಯುಯಜ್ಞ. ನಾನು ವಾಯುಯಜ್ಞವನ್ನು ಕೂಡ ಪ್ರಾರಂಭಿಸಲಿದ್ದೇನೆ’ ಎಂದು ಹೇಳಿದರು.
ವಾಯುಯಜ್ಞವೆಂದರೆ ಏನೋ ನನಗೆ ತಿಳಿಯದಾಯಿತು. ಅಷ್ಟರಲ್ಲಿ ಹೊಟ್ಟೆನೋವಿನಿಂದ ನರಳುತ್ತಿದ್ದ ಒಬ್ಬ ವೃದ್ಧ ಬ್ರಾಹ್ಮಣನು ಕುರುಗಡ್ಡೆಗೆ ಬಂದನು. ಆತನು ವಿಪರೀತವಾಗಿ ಬಾಧೆ ಪಡುತ್ತಿದ್ದನು. ಈ ನೋವನ್ನು ಸಹಿಸಿಕೊಳ್ಳುವದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳುವದೇ ಮೇಲು, ಎಂದು ಆತನು ಹೇಳಿದನು.
ಆಗ ಶ್ರೀಪಾದರು, ‘ನೀನು ಪೂರ್ವ ಜನ್ಮದಲ್ಲಿ ಎಷ್ಟೋ ಜನರನ್ನು ನಿನ್ನ ವಾಗ್ಬಾಣಗಳಿಂದ ತುಂಬ ಹಿಂಸಿಸಿದ್ದೀಯೆ. ಚುಚ್ಚು ಮಾತುಗಳಿಂದ ಬಹಳ ಬಾಧೆ ಪಡಿಸಿದ್ದೀಯೆ. ಅದರ ಫಲವಾಗಿ ಈಗ ನಿನಗೆ ಈ ದುರದೃಷ್ಟಕರವಾದ ವ್ಯಾಧಿಯು ಪ್ರಾಪ್ತವಾಗಿದೆ. ಮಾನವರ ವಾಗ್ದೋಷಗಳನ್ನು ಕಳೆದುಕೊಳ್ಳುವದಕ್ಕೆ ಈ ಕಲಿಯುಗದಲ್ಲಿ ಭಗವಂತನ ನಾಮಸ್ಮರಣೆಯನ್ನು ಬಿಟ್ಟರೆ ಬೇರೊಂದಿಲ್ಲ. ಇದರಿಂದ ವಾಯುಮಂಡಲವೆಲ್ಲವೂ ಪರಿಶುದ್ಧವಾಗುತ್ತದೆ. ನಾನು ಕುರುಗಡ್ಡೆಯಲ್ಲಿ ನಾಮಸ್ಮರಣೆ ಎಂಬ ಮಹಾಯಜ್ಞವನ್ನು ಪ್ರಾರಂಭಿಸುವದರ ಮೂಲಕ ಅದಕ್ಕೆ ಶ್ರೀಕಾರವನ್ನು ಹಾಕುತ್ತಿದ್ದೇನೆ. ಯೋಗ ಸ್ಥಾಯಿಯಲ್ಲಿ ಪರಾ, ಪಶ್ಯಂತಿ, ಮಧ್ಯಮ, ವೈಖರಿ ಎನ್ನುವ ವಾಗ್ರೂಪಗಳನ್ನು ನಿಯಂತ್ರಿಸುವವನಿದ್ದೇನೆ. ಯಾರೇ ಆಗಲಿ ‘ಶ್ರೀಪಾದವಲ್ಲಭ ದಿಗಂಬರ! ದತ್ತ ದಿಗಂಬರ!’ಎಂದು ಮನಃಸ್ಫೂರ್ತಿಯಾಗಿ ನಾಮಸ್ಮರಣೆಯನ್ನು ಮಾಡಿದರೆ ಅವರಿಗೆ ನಾನು ಅತ್ಯಂತ ಸುಲಭಪ್ರಾಪ್ತನಾಗಿ ಶುಭಫಲಗಳನ್ನು ಉಂಟು ಮಾಡುತ್ತೇನೆ’ ಎಂದರು.
ಶ್ರೀಪಾದರ ಆದೇಶದಂತೆ ಮೂರು ದಿನಗಳು ಹಗಲೂ ರಾತ್ರಿ, ಕುರುಗಡ್ಡೆಯಲ್ಲಿ ‘ಶ್ರೀಪಾದ ಶ್ರೀವಲ್ಲಭ ದಿಗಂಬರ!’ ಎಂಬ ನಾಮಸ್ಮರಣೆಯು ಮಾಡಲ್ಪಟ್ಟಿತು. ಆ ಮೂರು ದಿನ ಮಾತ್ರವೇ ಶ್ರೀಪಾದರು ರಾತ್ರಿಯ ಹೊತ್ತು ಕುರುಗಡ್ಡೆಯಲ್ಲಿರಲು ಎಲ್ಲರಿಗೂ ಅನುಮತಿ ಕೊಟ್ಟರು. ವೃದ್ಧ ಬ್ರಾಹ್ಮಣನ ಹೊಟ್ಟೆ ನೋವು ನಿವಾರಿಸಲ್ಪಟ್ಟಿತು.
ಶ್ರೀಪಾದರು, ‘ವಾಯುಮಂಡಲವೆಲ್ಲವೂ ಈಗ ಎಲ್ಲರೂ ತಪ್ಪು ಮಾತುಗಳನ್ನು ಆಡುತ್ತಿರುವದರಿಂದ ಅವರ ವಾಗ್ಜಾಲದಿಂದ ತುಂಬಿ ಹೋಗಿದೆ. ಮಾನವನು ಯಾವುದಾದರೂ ಒಂದು ಮಾತನ್ನು ಆಡಿದಾಗ ಪ್ರಕೃತಿಯಲ್ಲಿನ ಸತ್ವ, ರಜಸ್, ತಮೋ ಗುಣಗಳಲ್ಲಿ ಒಂದು ಗುಣಗಳನ್ನಾಗಲಿ, ಎರಡು ಗುಣಗಳನ್ನಾಗಲಿ, ಇಲ್ಲವೆ ಮೂರು ಗುಣಗಳನ್ನಾಗಲಿ ಕೆರಳಿಸುತ್ತದೆ. ಆ ಕೆರಳಿಸಿದ ಗುಣಗಳನ್ನು ಸಮತೋಲನಕ್ಕೆ ತರದಿರುವದರಿಂದ ಪೃಥ್ವಿಯನ್ನೆಲ್ಲಾ ವ್ಯಾಪಿಸಿರುವ ವಾಯುರಾಕಾಶದ ಮೇಲೆ ದುಷ್ಪ್ರಭಾವ ಉಂಟಾಗುತ್ತದೆ. ಪಂಚಭೂತಗಳು ದೂಷಿತವಾಗುವದರಿಂದ ಒಟ್ಟಿಗೆ ಎಲ್ಲವೂ ದೂಷಿತವಾಗಿ ಮನುಷ್ಯನ ಮನಸ್ಸು, ಶರೀರ, ಅಂತರಾತ್ಮಗಳು ದೂಷಿತವಾಗುತ್ತವೆ. ಆ ಕಾರಣದಿಂದ ಪಾಪಕರ್ಮಗಳನ್ನು ಮಾಡುತ್ತಾನೆ. ಅದರಿಂದ ದರಿದ್ರನಾಗುತ್ತಾನೆ. ದಾರಿದ್ರ್ಯದಿಂದ ಮತ್ತೆ ಪಾಪ ಕರ್ಮಗಳನ್ನು ಮಾಡುತ್ತಾನೆ. ಪಾಪ ಕರ್ಮಗಳಿಂದ ಮನಸ್ಸು ಕಲುಷಿತವಾಗಿ ದಾನಾದಿ ಪುಣ್ಯ ಕರ್ಮಗಳನ್ನು ಮಾಡದೆ ಹೋಗುತ್ತಾನೆ. ಅವನು ಇನ್ನೂ ದರಿದ್ರನಾಗುತ್ತಾನೆ.
(ಮುಂದುವರಿಯುವದು)
ಪ್ರಭಾ ಭಟ್ಟ, ಪುಣೆ

https://t.me/SSCJSGD
👍2
ಶ್ರೀಪಾದ ಶ್ರೀವಲ್ಲಭರ ಚರಿತಾಮೃತ
Episode 403
ಜಯ ಶ್ರೀ ಗುರು ದೇವ ದತ್ತ!!

೪೦೩. ಭೌತಿಕವಾಗಿ ಅನೇಕ ವರ್ಷಗಳು ಬಾಧೆ ಪಡಬೇಕಾದ ದುಷ್ಕರ್ಮ ಯೋಗವನ್ನು ಶ್ರೀಪಾದವಲ್ಲಭರು, ಆ ಕ್ಷಯ ಪೀಡಿತನು ಈ ರೀತಿಯಾಗಿ ಮಾನಸಿಕವಾಗಿ ಬಾಧೆಗಳನ್ನು ಅನುಭವಿಸುವಂತೆ ಮಾಡಿ ಅವನನ್ನು ಕರ್ಮ ವಿಮುಕ್ತನನ್ನಾಗಿ ಮಾಡಿದರು.
ಶ್ರೀ ಶಂಕರ ಭಟ್ಟರ ಶ್ರೀಪಾದ ಶ್ರೀವಲ್ಲಭ ದಿವ್ಯ ಚರಿತಾಮೃತದ ಐವತ್ತನೇ ಅಧ್ಯಾಯದ ಕೊನೆಯ ಭಾಗ
(ಇಲ್ಲಿಯವರೆಗೆ : ಶ್ರೀಪಾದವಲ್ಲಭರು ಕಲಿಯುಗದಲ್ಲಿ ಭಗವಂತನ ನಾಮಸ್ಮರಣೆ ಬಿಟ್ಟರೆ ಬೇರೊಂದಿಲ್ಲ, ವಾಗ್ದೋಷ ನಿವಾರಣೆಗೆ, ವಾಯುಮಂಡಲ ಪರಿಶುದ್ಧವಾಗುವದಕ್ಕೆ ಮೂರು ದಿನ ಹಗಲೂ ರಾತ್ರಿ ‘ಶ್ರೀಪಾದವಲ್ಲಭ ದಿಗಂಬರ! ದತ್ತ ದಿಗಂಬರ!’ ನಾಮಸ್ಮರಣೆಯ ಯಜ್ಞವನ್ನು ಶ್ರೀಪಾದರ ಆದೇಶದಂತೆ ಮಾಡಲು, ತನ್ನ ವಾಗ್ಬಾಣಗಳಿಂದ ಜನರನ್ನು ಹಿಂಸಿಸಿ, ಅದರ ಫಲವಾಗಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವೃದ್ಧ ಬ್ರಾಹ್ಮಣನ ನೋವು ನಿವಾರಣೆಯಾಯಿತು. ಶ್ರೀಪಾದರು ಮಾನವನ ದಾರಿದ್ರ್ಯಕ್ಕೆ, ಅಧಃಪತನಕ್ಕೆ ಆತನ ದೂಷಿತ ಮಾತೇ ಕಾರಣ ಎಂದು ವಿವರಿಸಿದರು.)

ತ್ರಿಕರಣ ಶುದ್ಧಿಯ ಅವಶ್ಯಕತೆ :
‘ಮಾನವನು ದಾರಿದ್ರ್ಯದಿಂದ ಮುಕ್ತನಾಗಬೇಕಾದರೆ, ಇಲ್ಲವೆ ಇತರ ಪಾಪಕರ್ಮಗಳಿಂದ ಮುಕ್ತನಾಗಬೇಕಾದರೂ ಮನೋವಾಕ್ಕಾಯಗಳಿಂದ ಪರಿಶುದ್ಧನಾಗಿರಬೇಕು. ಇದನ್ನೇ ತ್ರಿಕರಣ ಶುದ್ಧಿ ಎನ್ನುತ್ತಾರೆ. ಮನಸ್ಸಿನಲ್ಲಿ ಏನಿದೆಯೋ ಅದೇ ಮಾತಿನಿಂದ ಹೊರಬರಬೇಕು. ಮಾತಿನಿಂದ ಹೊರಬಂದದ್ದನ್ನೇ ಕರ್ಮರೂಪವಾಗಿ ಮಾಡಬೇಕು. ತ್ರಿಕರಣಶುದ್ಧಿಯನ್ನು ಹೊಂದಿದ ಮಾನವರು ಮಹನೀಯರಾಗುತ್ತಾರೆ.
ಮನಸ್ಸಿನಲ್ಲಿ ಅಂದುಕೊಂಡದ್ದೇ ಒಂದು. ಮಾತಿನ ಮೂಲಕ ಹೊರಬಂದದ್ದು ಮತ್ತೊಂದು, ಈ ಎರಡೂ ಅಲ್ಲದೆ ಮಾಡುವದು ಇನ್ನೊಂದು. ಇದೇ ತ್ರಿಕರಣ ಶುದ್ಧಿ ಇಲ್ಲದೇ ಹೋಗುವದು. ಆಗ ಅವನು ದುರಾತ್ಮನಾಗುತ್ತಾನೆ. ಈ ಕಲಿಯುಗದಲ್ಲಿ ಸುಲಭವಾಗಿ ಭವಸಾಗರದಿಂದ ಪಾರಾಗಲು ಅನೇಕ ಮಾರ್ಗಗಳಿವೆ. ಅದರಲ್ಲಿ ನಾಮಸ್ಮರಣೆಯು ಅತ್ಯಂತ ಸುಲಭವಾದದ್ದಾಗಿದೆ. ನಾಮವನ್ನು ನಾಲಿಗೆಯ ಮೇಲೆ ನಾಟ್ಯವಾಡಿಸುವದರಿಂದ ಪವಿತ್ರವಾದ ಮಾತುಗಳನ್ನಾಡಲು ಅಭ್ಯಾಸವಾಗುತ್ತದೆ. ನಾಮವನ್ನು ಮಾಡುವಾಗ ಮನಸ್ಸು ದೈವದ ಮೇಲೆ ಕೇಂದ್ರೀಕ್ರತವಾಗುವದರಿಂದ ಮನಸ್ಸು ಕೂಡಾ ಪವಿತ್ರವಾಗುತ್ತದೆ. ಆಗ ಪವಿತ್ರ ಕರ್ಮಗಳನ್ನು ಮಾಡಲು ತಾನಾಗಿಯೇ ಪ್ರೇರಣೆ ಉಂಟಾಗುತ್ತದೆ’ ಎಂದು ನುಡಿದರು.
ಕರ್ಮ ವಿಮೋಚನೆ :
ಒಮ್ಮೆ ಕ್ಷಯವ್ಯಾಧಿ ಪೀಡಿತನೊಬ್ಬನು ಕುರುವಪುರಕ್ಕೆ ಬಂದನು. ಅವನಿಗೆ ಮಧುಮೇಹ ರೋಗವೂ ಇತ್ತು. ಇವುಗಳ ಜೊತೆಗೆ ಇನ್ನೂ ಬೇರೆ ವ್ಯಾಧಿಗಳೂ ಇದ್ದವು. ಅವನನ್ನು ನೋಡಿ ಮಹಾಪ್ರಭುಗಳು ಬಹಳ ಕೋಪೋದ್ರಿಕ್ತರಾಗಿ, ‘ ಇವನು ಪೂರ್ವಜನ್ಮದಲ್ಲಿ ಮಹಾಕಳ್ಳ. ಎಷ್ಟೋ ಅಮಾಯಕರ ಸ್ವತ್ತನ್ನು ಅಪಹರಿಸಿ, ಅವರಿಗೆ ಎಲ್ಲಿಲ್ಲದ ಕಷ್ಟಗಳನ್ನು ತಂದೊಡ್ಡಿದ್ದಾನೆ. ಮಗಳ ವಿವಾಹಕ್ಕಾಗಿ ಒಬ್ಬ ತಂದೆಯು ಸಂಗ್ರಹಿಸಿದ್ದ ಹಣವನ್ನು ಕದ್ದನು. ಆತನು ಮಗಳ ಮದುವೆಯನ್ನು ಮಾಡಲಾಗಲಿಲ್ಲ. ಸಕಾಲದಲ್ಲಿ ಮಗಳ ಮದುವೆಯನ್ನು ಮಾಡಲಿಲ್ಲವೆಂದು ಅವನನ್ನು ಕುಲದಿಂದ ಹೊರಹಾಕಿದರು. ವರದಕ್ಷಿಣೆ ಕೊಡಲು ಹಣವಿಲ್ಲದುದರಿಂದ ಸರಿಯಾದ ಯುವಕರು ಸಿಕ್ಕದೆ ಒಬ್ಬ ವೃದ್ಧನಿಗೆ ಮದುವೆ ಮಾಡಿಕೊಡಲು ಯೋಚಿಸಿದರು. ಆಗ ಆತನ ಮಗಳು ಆತ್ಮಹತ್ಯೆ ಮಾಡಿಕೊಂಡಳು. ಪೂರ್ಣಾಯುಷ್ಮಂತಳಾಗಿದ್ದ ಅವಳ ಬದುಕು ಬೂದಿಯ ಪಾಲಾಗಿತ್ತು’ ಎಂದರು.
ಆ ಕ್ಷಯರೋಗಿಯು ಅತ್ಯಂತ ದೀನತೆಯಿಂದ ಶ್ರೀಪಾದರನ್ನು ಎಷ್ಟೋ ವಿಧವಾಗಿ ಬೇಡಿಕೊಂಡನು. ದಯಾಂತ ಹೃದಯರಾದ ಶ್ರೀಪಾದರು ಅವನನ್ನು ಪಂಚದೇವ ಪಹಾಡಿನಲ್ಲಿ ದರ್ಬಾರಿನ ಗೋಶಾಲೆಯಲ್ಲಿ ಮಲಗಲು ಹೇಳಿದರು. ಅಲ್ಲಿ ಸೊಳ್ಳೆಗಳ ಕಾಟ ಹೇಳತೀರದು. ಅವನಿಗೆ ಕುಡಿಯಲು ನೀರನ್ನೂ ಕೂಡ ಕೊಡಬೇಡಿರೆಂದು ಹೇಳಿದರು.
ಅವನಿಗೆ ರಾತ್ರಿ ಸ್ವಪ್ನದಲ್ಲಿ ರಾಕ್ಷಸರು ಕಾಣಿಸಿಕೊಂಡು ಅವನ ಕಂಠವನ್ನು ಹಿಸುಕಿ ಕೊಲ್ಲುತ್ತಿರುವ ಅನುಭವವನ್ನು ಪಡೆದನು. ಇನ್ನೊಂದು ಕನಸಿನಲ್ಲಿ ಒಂದು ದೊಡ್ಡ ಕಲ್ಲಿನ ಬಂಡೆಯನ್ನು ಅವನ ಎದೆಯ ಮೇಲೆ ಇಟ್ಟಂತಾಯಿತು. ಆ ಬಂಡೆಯ ಮೇಲೆ ಬಲಿಷ್ಠನಾದ ಒಬ್ಬ ಪೈಲವಾನನು ಕುಣಿದಾಡಿದನು. ಈ ಎರಡು ಕನಸುಗಳಿಂದ ಅವನ ಕರ್ಮಫಲವು ಪರಿಪಕ್ವವಾಗಿ ಅವನು ಸ್ವಸ್ಥನಾದನು. ಭೌತಿಕವಾಗಿ ಅನೇಕ ವರ್ಷಗಳು ಬಾಧೆ ಪಡಬೇಕಾದ ದುಷ್ಕರ್ಮ ಯೋಗವನ್ನು ಶ್ರೀಪಾದವಲ್ಲಭರು, ಆ ಕ್ಷಯ ಪೀಡಿತನು ಈ ರೀತಿಯಾಗಿ ಮಾನಸಿಕವಾಗಿ ಬಾಧೆಗಳನ್ನು ಅನುಭವಿಸುವಂತೆ ಮಾಡಿ ಅವನನ್ನು ಕರ್ಮ ವಿಮುಕ್ತನನ್ನಾಗಿ ಮಾಡಿದರು.
ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ ಜಯವಾಗಲಿ
(ಮುಂದುವರಿಯುವದು)
ಪ್ರಭಾ ಭಟ್ಟ, ಪುಣೆ

https://t.me/SSCJSGD
ಶ್ರೀಪಾದ ಶ್ರೀವಲ್ಲಭರ ಚರಿತಾಮೃತ
Episode 404
ಜಯ ಶ್ರೀ ಗುರು ದೇವ ದತ್ತ!!


೪೦೪. ಮಗೂ! ಶಂಕರಭಟ್ಟ! ನಾನು ಗುಪ್ತ ರೂಪನಾಗಿ ಇರಬೇಕಾದ ಸಮಯವು ಹತ್ತಿರ ಬರುತ್ತಿದೆ. ನಾನು ಕೃಷ್ಣಾ ನದಿಯಲ್ಲಿ ಅಂತರ್ಹಿತನಾಗುತ್ತೇನೆ …. ನೀನು ಬರೆಯುವ ಶ್ರೀಪಾದ ಶ್ರಿವಲ್ಲಭ ಚರಿತಾಮೃತ ಎಂಬ ಮಹಾ ಪವಿತ್ರಗ್ರಂಥವು ಭಕ್ತರ ಪಾಲಿಗೆ ಕಲ್ಪವೃಕ್ಷವಾಗುತ್ತದೆ.
ಶ್ರೀ ಶಂಕರ ಭಟ್ಟರ ಶ್ರೀಪಾದ ಶ್ರೀವಲ್ಲಭ ದಿವ್ಯ ಚರಿತಾಮೃತದ ಐವತ್ತೊಂದನೇ ಅಧ್ಯಾಯ ಪ್ರಾರಂಭ
(ಇಲ್ಲಿಯವರೆಗೆ : ಶ್ರೀಪಾದವಲ್ಲಭರು ಹೇಳಿದ ನಾಮಸ್ಮರಣೆಯ ಮಹತ್ವವನ್ನು ಶಂಕರಭಟ್ಟರು ತಿಳಿಸಿ, ನಂತರ ತ್ರಿಕರಣ ಶುದ್ಧಿಯ ಬಗ್ಗೆ ಶ್ರೀಪಾದರು ಹೇಳಿದ ಮಾತು ಮತ್ತು ಪೂರ್ವಕರ್ಮ ವಿಮೋಚನೆಗೆ ಮಾಡಿದ ಕ್ರಮ ಹೇಳಹತ್ತಿದರು. ಮಾನವನು ದಾರಿದ್ರ್ಯದಿಂದ ಮತ್ತು ಪಾಪಕರ್ಮಗಳಿಂದ ಮುಕ್ತನಾಗಲು, ತ್ರಿಕರಣ ಶುದ್ಧವಾಗಿರಬೇಕು ಅಂದರೆ, ಮನಸ್ಸಿನಲ್ಲಿ ಏನಿದೆಯೋ ಅದೇ ಮಾತಿನಿಂದ ಹೊರಬರಬೇಕು. ಮಾತಿನಿಂದ ಹೊರಬಂದದ್ದನ್ನೇ ಕರ್ಮರೂಪವಾಗಿ ಮಾಡಬೇಕು. ಅದರೊಂದಿಗೆ ನಾಮಸ್ಮರಣೆ ಮಾಡುವದರಿಂದ, ಪವಿತ್ರ ಕರ್ಮಗಳನ್ನು ಮಾಡಲು ತಾನಾಗಿಯೇ ಪ್ರೇರಣೆ ಉಂಟಾಗುತ್ತದೆ. ಪೂರ್ವಜನ್ಮದಲ್ಲಿ ಘೋರ ಕರ್ಮಮಾಡಿ ಈ ಜನ್ಮದಲ್ಲಿ ತೀವ್ರ ದೈಹಿಕ ಹಿಂಸೆಗೊಳಟ್ಟು ದೀನನಾಗಿದ್ದ ಒಬ್ಬನನ್ನು ಆತನ ಕರ್ಮಫಲವನ್ನು ಭೋಗಿಸುವ ಕ್ರಿಯೆಯ ಗತಿಯನ್ನು ದೈಹಿಕ ಮತ್ತು ಮಾನಸಿಕವಾಗಿ ತೀವ್ರಗೊಳಿಸಿ, ಅವನನ್ನು ರೋಗಮುಕ್ತ ಮಾಡಿದರು.)

ಜಲಗಂಡವೇ ಮೊದಲಾದ ಗಂಡಾಂತರಗಳಿಂದ ರಕ್ಷಣೆ; ಗ್ರಂಥ ಪಾರಾಯಣ ಮಹಿಮೆ :
ಇಷ್ಟರಲ್ಲಿ ಅಶ್ವಯುಜ ಕೃಷ್ಣ ದ್ವಾದಶಿ ಬಂತು. ಆ ದಿನ ಹಸ್ತಾ ನಕ್ಷತ್ರ. ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿದ ಮೇಲೆ ಶ್ರೀಪಾದರು ಸ್ವಲ್ಪ ಹೊತ್ತು ಧ್ಯಾನಸ್ಥರಾದರು. ನಾನು ಹರಿಒಲೆಯನ್ನು ಹಚ್ಚಲು ಎಷ್ಟು ಪ್ರಯತ್ನ ಪಟ್ಟರೂ ಹಚ್ಚಲಾಗಲಿಲ್ಲ. ಆರಿ ಹೋಗುತ್ತಿತ್ತು. ಶ್ರೀಪಾದರು ನನ್ನನ್ನು ಇನ್ನೊಂದು ಸಲ ಸ್ನಾನ ಮಾಡಿ ಬರುವಂತೆ ಹೇಳಿದರು. ಬಂದ ಮೇಲೆ, ‘ಮಗೂ! ಶಂಕರಭಟ್ಟ! ನಾನು ಗುಪ್ತ ರೂಪನಾಗಿ ಇರಬೇಕಾದ ಸಮಯವು ಹತ್ತಿರ ಬರುತ್ತಿದೆ. ನಾನು ಕೃಷ್ಣಾ ನದಿಯಲ್ಲಿ ಅಂತರ್ಹಿತನಾಗುತ್ತೇನೆ. ನಾನು ಈ ಕುರುವಪುರದಲ್ಲಿ ಗುಪ್ತರೂಪನಾಗಿ ತಿರುಗುತ್ತಿರುತ್ತೇನೆ. ಆಮೇಲೆ ನರಸಿಂಹ ಸರಸ್ವತಿ ಎಂಬ ಹೆಸರಿನಿಂದ ಸನ್ಯಾಸಿ ಧರ್ಮವನ್ನು ಪುನರುತ್ಥಾನ ಮಾಡುವದಕ್ಕೆ ಬರುತ್ತೇನೆ. ನೀನು ಬರೆಯುವ ಶ್ರೀಪಾದ ಶ್ರಿವಲ್ಲಭ ಚರಿತಾಮೃತ ಎಂಬ ಮಹಾ ಪವಿತ್ರಗ್ರಂಥವು ಭಕ್ತರ ಪಾಲಿಗೆ ಕಲ್ಪವೃಕ್ಷವಾಗುತ್ತದೆ. ಅದು ಅಕ್ಷರಸತ್ಯ ಗ್ರಂಥವಾಗುತ್ತದೆ. ಆಕಾಶದಲ್ಲಿ ಶಬ್ದ ಮಾತ್ರ ಇರುತ್ತದೆ. ನಾನು ದಿಕ್ಕುಗಳನ್ನೇ ನನ್ನ ಅಂಬರವನ್ನಾಗಿ ಉಳ್ಳವರು. ಅದಕ್ಕೆ ನಾನು ದಿಗಂಬರನೆಂದು ಕರೆಯಲ್ಪಡುತ್ತೇನೆ.
ಮನೋಮಯ ಪ್ರಪಂಚವನ್ನು ಪರಿಶುದ್ಧಿಗೊಳಿಸಲು ಈ ಗ್ರಂಥಪಠಣೆಯು ಎಷ್ಟೋ ಸಹಾಯಕವಾಗುತ್ತದೆ. ಈ ಗ್ರಂಥವನ್ನು ಪಾರಾಯಣ ಮಾಡುವವರಿಗೆ ಇಹಪರಗಳೆರಡೂ ಲಭಿಸುತ್ತವೆ. ಇದರಲ್ಲಿಯ ಪ್ರತಿಯೊಂದು ಅಕ್ಷರವು ವೇದವಾಕ್ಕುಗಳ ಸಮಾನವೆಂದು ತಿಳಿದುಕೋ. ನೀನು ಬರೆಯುವ ಸಂಸ್ಕೃತ ಪ್ರತಿ ನನ್ನ ಮಹಾಸಂಸ್ಥಾನದಲ್ಲಿ ಔದುಂಬರ ವೃಕ್ಷದ ಕೆಳಗೆ ಅನೇಕ ಆಳೆತ್ತರದ ಆಳದಲ್ಲಿ ಶಬ್ದ ಸ್ವರೂಪವಾಗಿ ನೆಲೆಸಿರುತ್ತದೆ. ಅದರಿಂದ ಹೊರಬರುವ ದಿವ್ಯ ಶಬ್ದಗಳು ಚರ್ಮಕರ್ಣಗಳಿಗೆ ಕೇಳಿಸುವದಿಲ್ಲ. ಹೃದಯದಲ್ಲಿ ನನ್ನ ಕರೆಯನ್ನು ಸ್ವೀಕರಿಸುವವರು ಖಚಿತವಾಗಿ ನನ್ನ ದರ್ಶನಕ್ಕೆ ಬರುತ್ತಾರೆ. ನಾನು ನನ್ನ ಭಕ್ತ ಸಂರಕ್ಷಣೆಯಲ್ಲಿ ಅತಿ ಜಾಗರೂಕನಾಗಿರುತ್ತೇನೆ. ನಿನ್ನ ಸಂಸ್ಕೃತ ಪ್ರತಿಗೆ ತೆಲುಗು ಅನುವಾದವು ಕೂಡ ಬರುತ್ತದೆ. ಅದು ಬಾಪನಾರ್ಯರ ೩೩ನೇ ತಲೆಮಾರಿನಲ್ಲಿ ಬೆಳಕಿಗೆ ಬರುತ್ತದೆ. ಅದು ಅನೇಕ ಭಾಷೆಗಳಿಗೆ ಅನುವಾದಿಸಲ್ಪಡುವದು. ಅದನ್ನು ಯಾವ ಭಾಷೆಯಲ್ಲಿ ಓದಿದರೂ ದಿವ್ಯಾನುಭವಗಳೂ, ರಕ್ಷಣೆಯೂ ಒಂದೇ ರೀತಿಯಾಗಿ ಇರುತ್ತದೆ.
(ಮುಂದುವರಿಯುವದು)
ಪ್ರಭಾ ಭಟ್ಟ, ಪುಣೆ

https://t.me/SSCJSGD
👍2
ಶ್ರೀಪಾದ ಶ್ರೀವಲ್ಲಭರ ಚರಿತಾಮೃತ
Episode 405
ಜಯ ಶ್ರೀ ಗುರು ದೇವ ದತ್ತ!!

೪೦೫. ಮೂರು ವರ್ಷಗಳ ನಂತರ ಬರುವ ಅಶ್ವಯುಜ ಕೃಷ್ಣ ದ್ವಾದಶಿ ದಿನ ನೀನು ರಚಿಸಿದ ಶ್ರೀಪಾದ ಶ್ರೀವಲ್ಲಭ ಚರಿತಾಮೃತವನ್ನು ನನ್ನ ಪಾದುಕೆಗಳ ಹತ್ತಿರ ಪಠಿಸು. ಆ ದಿನ ನನ್ನ ದರ್ಶನಕ್ಕೆ ಬರುವವರೆಲ್ಲರೂ ಧನ್ಯರು. ಅವರೆಲ್ಲರಿಗೂ ಮಂಗಳಮಯ ಆಶೀರ್ವಾದಗಳು …. ಶ್ರೀಪಾದ ಶ್ರೀವಲ್ಲಭ ಮಹಾಪ್ರಭುಗಳು ಈ ರೀತಿಯಾಗಿ ಹೇಳಿ ಕೃಷ್ಣಾನದಿಯೊಳಕ್ಕೆ ಇಳಿದು ಅದೃಶ್ಯರಾದರು.
ಶ್ರೀ ಶಂಕರ ಭಟ್ಟರ ಶ್ರೀಪಾದ ಶ್ರೀವಲ್ಲಭ ದಿವ್ಯ ಚರಿತಾಮೃತದ ಐವತ್ತೊಂದನೇ ಅಧ್ಯಾಯದ ಕೊನೆಯ ಭಾಗ
(ಇಲ್ಲಿಯವರೆಗೆ : ಅಶ್ವಯುಜ ಕೃಷ್ಣ ದ್ವಾದಶಿ ಹಸ್ತಾ ನಕ್ಷತ್ರದ ದಿನ ಶ್ರೀಪಾದವಲ್ಲಭರು, ಶಂಕರ ಭಟ್ಟರಿಗೆ ತಾವು ಗುಪ್ತರೂಪರಾಗಿರುವ ಸಮಯ ಹತ್ತಿರ ಬರುತ್ತಿದೆಯೆಂದು ಹೇಳಿ, ಆತನು ಬರೆಯುವ ದಿವ್ಯಚರಿತ್ರ ಗ್ರಂಥವು ಭಕ್ತರಿಗೆ ಕಲ್ಪವೃಕ್ಷವಾಗುತ್ತದೆಂದು ಹೇಳಿ, ಆತನ ಸಂಸ್ಕೃತದಲ್ಲಿನ ಕೃತಿ ಪೀಠಿಕಾಪುರದ ಔದುಂಬರ ವೃಕ್ಷದ ಕೆಳಗೆ ಶಬ್ದರೂಪದಲ್ಲಿ ಮಾತ್ರ ಇದ್ದರೂ, ಅದರ ತೆಲುಗು ಕೃತಿ ಬಾಪನಾರ್ಯರ ಮೂವತ್ಮೂರನೇ ತಲೆಮಾರಿನಲ್ಲಿ ಬೆಳಕಿಗೆ ಬಂದು, ಅನೇಕ ಭಾಷೆಗಳಲ್ಲಿ ಅನುವಾದಿಸಲ್ಪಟ್ಟು, ಅದನ್ನು ಯಾವ ಭಾಷೆಯಲ್ಲಿ ಓದಿದರೂ ದಿವ್ಯಾನುಭವಗಳೂ, ರಕ್ಷಣೆಯೂ ಒಂದೇ ರೀತಿಯಾಗಿ ಇರುತ್ತದೆ, ಎಂದು ಹೇಳಿದರು.)

ಭಕ್ತರಿಗೆ ಶ್ರೀಪಾದರ ಅಭಯ :
ನೀನು ನನಗೆ ಬಹಳ ಸೇವೆಯನ್ನು ಮಾಡಿದ್ದೀಯೆ. ನಾನು ತಂದೆಯ ಕೈಯಲ್ಲಿರುವ ಮಗುವಿನಂತೆ ಇದ್ದೆನು. ನನ್ನ ಮರದ ಪಾದರಕ್ಷೆಗಳನ್ನು ನಿನಗೆ ಬಹುಮಾನವಾಗಿ ಕೊಡುತ್ತಿದ್ದೇನೆ. ನೀನು ನಾನಿಲ್ಲವೆಂದು ದುಃಖಿಸಬೇಡ. ನೀನು ಮೂರು ವರ್ಷಗಳ ಕಾಲ ಇಲ್ಲಿಯೇ ಇರಬೇಕು. ಈ ಮೂರು ವರ್ಷಗಳಲ್ಲಿಯೂ ನಾನು ನನ್ನ ತೇಜೋಮಯ ರೂಪದಲ್ಲಿ ನಿನಗೆ ದರ್ಶನವನ್ನು ಕೊಡುತ್ತಿರುತ್ತೇನೆ. ನಿನಗೆ ಅನೇಕ ಯೋಗ ರಹಸ್ಯಗಳನ್ನು ತಿಳಿಸಿಕೊಡುತ್ತೇನೆ.
ಶ್ರೀಪಾದರ ಅಂತರ್ಧಾನ :
ಮೂರು ವರ್ಷಗಳ ನಂತರ ಬರುವ ಅಶ್ವಯುಜ ಕೃಷ್ಣ ದ್ವಾದಶಿ ದಿನ ನೀನು ರಚಿಸಿದ ಶ್ರೀಪಾದ ಶ್ರೀವಲ್ಲಭ ಚರಿತಾಮೃತವನ್ನು ನನ್ನ ಪಾದುಕೆಗಳ ಹತ್ತಿರ ಪಠಿಸು. ಆದಿನ ನನ್ನ ದರ್ಶನಕ್ಕೆ ಬರುವವರೆಲ್ಲರೂ ಧನ್ಯರು. ಅವರೆಲ್ಲರಿಗೂ ಮಂಗಳಮಯ ಆಶೀರ್ವಾದಗಳು.
ಶ್ರೀಪಾದ ಶ್ರೀವಲ್ಲಭ ಮಹಾಪ್ರಭುಗಳು ಈ ರೀತಿಯಾಗಿ ಹೇಳಿ ಕೃಷ್ಣಾನದಿಯೊಳಕ್ಕೆ ಇಳಿದು ಅದೃಶ್ಯರಾದರು.
ಅವರ ಮರದ ಪಾದುಕೆಗಳನ್ನು ನಾನು ಎದೆಗೆ ಒತ್ತಿಕೊಂಡು ತಾಯಿಯನ್ನು ಕಳೆದುಕೊಂಡ ಹಸುಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತೆನು. ಆ ತರುವಾಯ ಮೂರ್ಛೆ ಹೋದೆನು. ಎದ್ದಾಗ ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿ ಬಂದು ಧ್ಯಾನಸ್ಥನಾದೆನು. ನನ್ನ ಮನೋನೇತ್ರಗಳಿಗೆ ಶ್ರೀಪಾದ ಶ್ರೀವಲ್ಲಭರು ತಮ್ಮ ತೇಜೋಮಯ ರೂಪದಿಂದ ದರ್ಶನ ಕೊಟ್ಟರು.
ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ ಜಯವಾಗಲಿ
(ಮುಂದುವರಿಯುವದು)
ಪ್ರಭಾ ಭಟ್ಟ, ಪುಣೆ

https://t.me/SSCJSGD
👍1
ಶ್ರೀಪಾದ ಶ್ರೀವಲ್ಲಭರ ಚರಿತಾಮೃತ
Episode 406
ಜಯ ಶ್ರೀ ಗುರು ದೇವ ದತ್ತ!!

೪೦೬. ನಾನು ನನ್ನ ಯೋಗಾನುಭವಗಳನ್ನು ಒಂದು ಪುಸ್ತಕವಾಗಿ ಬರೆದಿದ್ದೆನು. ಅದನ್ನು ಹಿಮಾಲಯದಲ್ಲಿರುವ ಯೋಗಿಯೊಬ್ಬನು ತೆಗೆದುಕೊಂಡು ಹೋದನು.
ಶ್ರೀ ಶಂಕರ ಭಟ್ಟರ ಶ್ರೀಪಾದ ಶ್ರೀವಲ್ಲಭ ದಿವ್ಯ ಚರಿತಾಮೃತದ ಐವತ್ತೆರಡನೇ ಅಧ್ಯಾಯ
(ಇಲ್ಲಿಯವರೆಗೆ : ಶ್ರೀಪಾದವಲ್ಲಭರು ಶಂಕರಭಟ್ಟರಿಗೇ ಅಲ್ಲೇ ಮೂರು ವರ್ಷಗಳಿದ್ದು, ತದನಂತರ ಇದೇ ದಿನ, ಅವನು ಬರೆದ ಶ್ರೀಪಾದ ಶ್ರೀವಲ್ಲಭ ದಿವ್ಯ ಚರಿತಾಮೃತವನ್ನು ತಾನು ಕೊಟ್ಟ ಪಾದುಕೆಗಳ ಹತ್ತಿರ ಪಠಿಸಲು ಆದೇಶಿಸಿ, ಕೃಷ್ಣಾ ನದಿಯಲ್ಲಿಳಿದು ಅಂತರ್ಧಾನರಾದರು. ಬಿಕ್ಕಿ ಬಿಕ್ಕಿ ಅಳುತ್ತ ಮೂರ್ಛೆ ಹೋದ ಶಂಕರಭಟ್ಟರು ಎಚ್ಚರಾದ ಮೇಲೆ, ಕೃಷ್ಣೆಯಲ್ಲಿ ಸ್ನಾನ ಮಾಡಿ ಧ್ಯಾನಕ್ಕೆ ಕುಳಿತಿರಲು, ಶ್ರೀಪಾದವಲ್ಲಭರು ಅವರ ಮನೋನೇತ್ರಗಳಿಗೆ ತೇಜೋಮಯ ರೂಪದಿಂದ ದರ್ಶನ ಕೊಟ್ಟರು.)
ಶ್ರೀಪಾದರಾಜಂ ಶರಣಂ ಪ್ರಪದ್ಯೇ
ಜಯವಾಗಲಿ ಜಯವಾಗಲಿ ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ

ಶಂಕರಭಟ್ಟರ ಯೋಗಾನುಭವ ನಿರೂಪಣೆ; ಶ್ರೀಪಾದರ ದಿವ್ಯ ದರ್ಶನ :
ನಾನು ಮೂರು ವರ್ಷಗಳ ಕಾಲ ಪ್ರತಿದಿನವೂ ಅರ್ಧರಾತ್ರಿ ಸಮಯದಲ್ಲಿ ಶ್ರೀಪಾದ ಶ್ರೀವಲ್ಲಭರ ದಿವ್ಯ ತೇಜೋಮಯ ದರ್ಶನವನ್ನು ಪಡೆಯುತ್ತಿದ್ದೆನು. ನಾನು ನನ್ನ ಯೋಗಾನುಭವಗಳನ್ನು ಒಂದು ಪುಸ್ತಕವಾಗಿ ಬರೆದಿದ್ದೆನು. ಅದನ್ನು ಹಿಮಾಲಯದಲ್ಲಿರುವ ಯೋಗಿಯೊಬ್ಬನು ತೆಗೆದುಕೊಂಡು ಹೋದನು. ಶ್ರೀಪಾದರ ಆಜ್ಞೆಗನುಸಾರವಾಗಿಯೇ ಈ ರೀತಿ ನಡೆಯಿತು.
ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ ಜಯವಾಗಲಿ
(ಮುಂದುವರಿಯುವದು)
ಪ್ರಭಾ ಭಟ್ಟ, ಪುಣೆ
👍3
ಶ್ರೀಪಾದ ಶ್ರೀವಲ್ಲಭರ ಚರಿತಾಮೃತ
Episode 407
ಜಯ ಶ್ರೀ ಗುರು ದೇವ ದತ್ತ!!


೪೦೭. ನಾನು ರಚಿಸಿದ ಚರಿತಾಮೃತವನ್ನು ಶ್ರೀಪಾದರ ದಿವ್ಯ ಪಾದುಕೆಗಳ ಹತ್ತಿರ ಪಾರಾಯಣ ಮಾಡಿದೆ. ಬಂದವರು ಐದು ಜನ. ಅವರು ಮಹದಾನಂದವನ್ನು ಹೊಂದಿದರು. ನಾನು ಪಂಡಿತನಲ್ಲ. ಆದ್ದರಿಂದ ಯಾವ ಅಧ್ಯಾಯವನ್ನು ಓದಿದರೆ ಯಾವ ವಿಧವಾದ ಫಲ ಲಭಿಸುತ್ತದೆಯೆಂದು ಹೇಳಲಾರೆ.
ಶ್ರೀ ಶಂಕರ ಭಟ್ಟರ ಶ್ರೀಪಾದ ಶ್ರೀವಲ್ಲಭ ದಿವ್ಯ ಚರಿತಾಮೃತದ ಐವತ್ಮೂರನೇ ಅಧ್ಯಾಯ
(ಇಲ್ಲಿಯವರೆಗೆ : ಶಂಕರಭಟ್ಟರು ಪ್ರತಿದಿನ ರಾತ್ರಿ ಶ್ರೀಪಾದರ ತೇಜೋಮಯ ದರ್ಶನವನ್ನು ಪಡೆಯುತ್ತ, ತಮ್ಮ ಯೋಗಾನುಭವಗಳ ಪುಸ್ತಕವನ್ನೂ ಬರೆದರು. ಅದನ್ನು ಹಿಮಾಲಯದಲ್ಲಿರುವ ಯೋಗಿಯೊಬ್ಬನು ತೆಗೆದುಕೊಂಡು ಹೋದನು.)
ಶ್ರೀಪಾದರಾಜಂ ಶರಣಂ ಪ್ರಪದ್ಯೇ
ಜಯವಾಗಲಿ ಜಯವಾಗಲಿ ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ

ಶ್ರೀಪಾದ ಶ್ರೀವಲ್ಲಭರ ಚರಿತಾಮೃತವು ಪೀಠಿಕಾಪುರವನ್ನು ಸೇರುವ ವಿಧಾನ; ಶ್ರೀಪಾದ ಶ್ರೀವಲ್ಲಭರ ಚರಿತಾಮೃತ ವಿಶೇಷಗಳು :
ನಾನು ರಚಿಸಿದ ಶ್ರೀಪಾದ ಶ್ರೀವಲ್ಲಭರ ಚರಿತಾಮೃತವು ಶ್ರೀಪಾದರ ಸೋದರ ಮಾವನವರ ವಂಶದವರ ಹತ್ತಿರ ಸ್ವಲ್ಪ ಕಾಲವಿರುತ್ತದೆ. ಆ ತರುವಾಯ ಇದನ್ನು ತೆಲುಗಿಗೆ ಅನುವಾದ ಮಾಡಬೇಕು. ತೆಲುಗು ಅನುವಾದವು ಪೂರ್ತಿಯಾದ ಮೇಲೆ ನನ್ನ ಸಂಸ್ಕೃತ ಕೃತಿ ಅದೃಶ್ಯವಾಗುತ್ತದೆ. ಗಂಧರ್ವರು ಇದನ್ನು ತೆಗೆದುಕೊಂಡು ಹೋಗಿ ಶ್ರೀಪಾದರ ಜನ್ಮಸ್ಥಳದಲ್ಲಿ ಕೆಲವು ಆಳೆತ್ತರದ ಕೆಳಗೆ ಇಡುತ್ತಾರೆ. ಅಲ್ಲಿ ಅದನ್ನು ಸಿದ್ಧ ಯೋಗಿಗಳು ಪಾರಾಯಣ ಮಾಡುತ್ತಾರೆ.
ನಾನು ರಚಿಸಿದ ಚರಿತಾಮೃತವನ್ನು ಶ್ರೀಪಾದರ ದಿವ್ಯ ಪಾದುಕೆಗಳ ಹತ್ತಿರ ಪಾರಾಯಣ ಮಾಡಿದೆ. ಬಂದವರು ಐದು ಜನ. ಅವರು ಮಹದಾನಂದವನ್ನು ಹೊಂದಿದರು. ನಾನು ಪಂಡಿತನಲ್ಲ. ಆದ್ದರಿಂದ ಯಾವ ಅಧ್ಯಾಯವನ್ನು ಓದಿದರೆ ಯಾವ ವಿಧವಾದ ಫಲ ಲಭಿಸುತ್ತದೆಯೆಂದು ಹೇಳಲಾರೆ. ಶ್ರೀ ಬಾಪನಾರ್ಯರ ೩೩ನೆಯ ತಲೆಮಾರಿನಲ್ಲಿ ಈ ಗ್ರಂಥದ ತೆಲುಗು ಪ್ರತಿ ಬೆಳಕಿಗೆ ಬರುತ್ತದೆ. ಈ ತೆಲುಗು ಪ್ರತಿಯನ್ನು ಬೆಳಕಿಗೆ ತರುವದಕ್ಕೆ ಮುಂಚೆ, ಅದನ್ನು ಬೆಳಕಿಗೆ ತರಲು ಶ್ರೀಪಾದರು ಯಾರನ್ನು ನಿಯಮಿಸುತ್ತಾರೋ ಅವರು, ಮೂಲ ತೆಲುಗು ಪ್ರತಿಯನ್ನು ವಿಜಯವಾಡ ಮಹಾಕ್ಷೇತ್ರದ ಕೃಷ್ಣಾ ನದಿಯಲ್ಲಿ ನಿಮಜ್ಜನ ಮಾಡಬೇಕು.
ಬೆಳಕಿಗೆ ತರಲಿರುವ ಅದೃಷ್ಟವಂತಾದ ವ್ಯಕ್ತಿಯು ಪೀಠಿಕಾಪುರದಲ್ಲಿ ಶ್ರೀಪಾದವಲ್ಲಭರ ಮಹಾಸಂಸ್ಥಾನವಿರುವ ಪವಿತ್ರ ಸ್ಥಳದಲ್ಲಿ ಶ್ರೀಪಾದ ಶ್ರೀವಲ್ಲಭ ಚರಿತಾಮೃತದ ತೆಲುಗು ಪ್ರತಿಯನ್ನು ಪಾರಾಯಣ ಮಾಡಿ ಅವರ ಶ್ರೀಚರಣಗಳಿಗೆ ಸಮರ್ಪಿಸಬೇಕು. ಪಾರಾಯಣದ ಮಧ್ಯದಲ್ಲಿ ಆ ಅದೃಷ್ಟವಂತನಾದ ವ್ಯಕ್ತಿಗೆ ಗಾಣಗಾಪುರದಿಂದ ಪ್ರಸಾದವು ಅಯಾಚಿತವಾಗಿ ಪ್ರಾಪ್ತವಾಗುತ್ತದೆ. ಆ ವ್ಯಕ್ತಿಯು ಬಾಪನಾರ್ಯರ ವಂಶದ ೩೩ನೆಯ ತಲೆಮಾರಿಗೆ ಸೇರಿದ ವ್ಯಕ್ತಿಯಾಗಿರುತ್ತಾನೆ. ಇದು ತೇಜೋಮಯ ರೂಪದಲ್ಲಿ ದರ್ಶನ ಕೊಟ್ಟ ಶ್ರೀಪಾದ ಶ್ರೀವಲ್ಲಭರ ದಿವ್ಯವಚನ.
(೫೩ನೇ ಅಧ್ಯಾಯ ಸಮಾಪ್ತ)
ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ ಜಯವಾಗಲಿ
(ಶ್ರೀ ಶಂಕರ ಭಟ್ಟರ ಶ್ರೀಪಾದ ಶ್ರೀವಲ್ಲಭರ ದಿವ್ಯ ಚರಿತಾಮೃತ ಸರಣಿ ಬರಹ ಸಮಾಪ್ತ)
ಪ್ರಭಾ ಭಟ್ಟ, ಪುಣೆ
‘ಶ್ರೀಪಾದ ಶ್ರೀವಲ್ಲಭರ ದಿವ್ಯ ಚರಿತಾಮೃತ’ ಸರಣಿಯ ಕೊನೆಗೊಂದು ಮಾತು …
ಒಂದು ವರ್ಷವೇ ಕಳೆದಿರಬೇಕು ….
ಮಹಾನುಭಾವ ಶ್ರೀ ಶಂಕರಭಟ್ಟರ ಜತೆಗೆ ನಾವೂ ಕುರುಗಡ್ಡೆ, ಪೀಠಿಕಾಪುರಗಳ ಅದ್ಭುತ ಪ್ರಯಾಣ ಮಾಡುತ್ತಾ, ಶ್ರೀಪಾದವಲ್ಲಭರ ಚಿತ್ರ ವಿಚಿತ್ರ ಲೀಲೆಗಳನ್ನು ನೋಡುತ್ತಾ ಸಾಗುತ್ತಿರುವಾಗ ದಿನಗಳು ಕಳೆದದ್ದೇ ಅರಿವಾಗಲಿಲ್ಲ. ಪ್ರತಿ ಹೆಜ್ಜೆಯೂ ಯಾವುದೋ ಅಲೌಕಿಕ ಲೋಕಕ್ಕೇ ಕರೆದೊಯ್ಯುತ್ತಿತ್ತು ಎಂದೇ ಹೇಳಬೇಕು. ಪ್ರತಿಯೊಂದನ್ನು ನೋಡುವ, ಅನುಭವಿಸುವ ದೃಷ್ಟಿಕೋನವೇ ಒಂದು ರೀತಿ ಅಸಾಮಾನ್ಯವಾಗಿತ್ತು. ನಿಮ್ಮೆಲ್ಲರೊಂದಿಗೆ ಇದನ್ನು ಹಂಚಿಕೊಂಡು ನಾನೂ ಈ ಪಯಣದಲ್ಲಿ ಅತ್ಯಂತ ಸಂತೋಷಪಟ್ಟೆ. ಇದೊಂದು ಜೀವನದ ಆನಂದಪರ್ವವೇ ಆಯಿತು ಎಂದರೆ ಅತಿಶಯೋಕ್ತಿಯೇನಲ್ಲ. ಇವೆಲ್ಲ ಈ ಪಯಣದ ಒಂದು ವಿಶೇಷ ಆಕರ್ಷಕ ಭಾಗವಾದರೂ ಅದೊಂದೇ ಈ ಪಯಣದ ಧ್ಯೇಯವಲ್ಲ.
ಇದು ಗುರು ಶ್ರೀಪಾದ ವಲ್ಲಭರ ದಿವ್ಯ ಚರಿತ್ರೆ. ಇಲ್ಲಿಯ ಪ್ರತಿ ಅಕ್ಷರಗಳೂ ಆ ದತ್ತಾವತಾರಿಯ ಆಶೀರ್ವಾದ, ಅಭಯಹಸ್ತಗಳನ್ನು ಹೊತ್ತು ನಿಂತಿವೆ. ದಿನವೂ ಸ್ವಲ್ಪಸ್ವಲ್ವವೇ ಆದರೂ, ನಿರಂತರ ಓದುತ್ತ ಸಂಪೂರ್ಣ ಗುರುಚರಿತ್ರೆಯ ಪುಣ್ಯ ಪಾರಾಯಣವೇ ಘಟಿಸಿತು. ಈ ಗುರುಚರಿತ್ರೆಯ ಗ್ರಂಥದ ಪ್ರಾರಂಭದಲ್ಲಿ ಪಾರಾಯಣ ವಿಧಿಯೂ ಇದೆ ಮತ್ತು ಪ್ರತಿ ಅಧ್ಯಾಯವೂ ಮನುಷ್ಯನ ವಿವಿಧ ನಿರ್ದಿಷ್ಟ ಐಹಿಕ ಜೀವನದ ಆಧಿ ವ್ಯಾಧಿಗಳನ್ನು, ಕಷ್ಟ ಕೋಟಲೆಗಳನ್ನು ಮತ್ತು ಪಾರಮಾರ್ಥಿಕ ಅಡ್ಡಿ ಅಡಚಣೆಗಳನ್ನು ಬಗೆಹರಿಸುವ ಬಗ್ಗೆ ಮಾಹಿತಿಯೂ ಇದೆ. ಒಟ್ಟಿನಮೇಲೆ ಈ ಗ್ರಂಥವು ಶ್ರೀಪಾದ ಶ್ರೀವಲ್ಲಭರ ಪ್ರಚಂಡ ಶಕ್ತಿಯನ್ನು ಹೊಂದಿದೆ ಮತ್ತು ನಮ್ಮ ಮನ ಬುದ್ಧಿಗೆ ಎಟುಕದ ರೀತಿಯಲ್ಲಿ ಕಾರ್ಯ ಮಾಡುತ್ತದೆ ಎಂದೇ ಹೇಳಬಹುದು.
ಈ ಸಂದರ್ಭದಲ್ಲಿ, ಪರಮಪೂಜ್ಯ ಪರಮಹಂಸ ಸದ್ಗುರು ಶ್ರೀಸತ್ ಉಪಾಸಿ, ಶ್ರೀ ಗುರು ಕನ್ನೇಶ್ವರ ಸ್ವಾಮಿ ದತ್ತಾವಧೂತ ಆಶ್ರಮ, ದೊಡ್ಡೇರಿ, ಚಳ್ಳಕೆರೆ, ಚಿತ್ರದುರ್ಗದವರು, ಗ್ರಂಥದಲ್ಲಿ ಹೇಳಿದ ದಿವ್ಯ ಸಂದೇಶದ ಕೆಲ ಸಾಲುಗಳನ್ನು ಈ ಕೆಳಗೆ ಬರೆದಿದ್ದೇನೆ.
‘ಭಕ್ತವೃಂದಕ್ಕೆ ಶುಭವಾಗಲಿ. ಕಾಲಕಾಲಕ್ಕೆ ಭಗವಂತನೇ ಅನೇಕ ಬಾರಿ ಅವತರಿಸುತ್ತಾನೆ, ಮಾರ್ಗದರ್ಶನವನ್ನೂ ನೀಡುತ್ತಾನೆ, ಎನ್ನುವದಕ್ಕೆ ಶ್ರೀಪಾದ ಶ್ರೀವಲ್ಲಭರ ದಿವ್ಯ ಚರಿತಾಮೃತವೇ ಸಾಕ್ಷಿ. ಅನೇಕ ಸಂಶಯಗಳ ಸುಳಿಯಲ್ಲಿ ಸಿಲುಕಿ ಪರಿತಪಿಸುವ ಜೀವಿಗಳ ಉದ್ಧಾರಕ್ಕಾಗಿಯೇ ಈ ಗ್ರಂಥವನ್ನು ಏಳುನೂರು ವರ್ಷಗಳ ನಂತರ ನಮಗೆ ಗೋಚರಿಸುವಂತೆ ಮಾಡಿದ್ದಾನೆ. ಇದು ನಮ್ಮೆಲ್ಲರ ಭಾಗ್ಯ. ಅನೇಕ ಜನ್ಮಗಳಿಂದ ಮಾಡಿದ ಪುಣ್ಯಫಲದಿಂದ, ಮಾಡಿದ ಸೇವೆಯಿಂದ, ಅವನ ಕೃಪೆಯು ಈ ರೀತಿಯಾಗಿ ಹರಿದು ಬಂದಿದೆ. ಇದು ನಮ್ಮ ಜನ್ಮೋದ್ಧಾರಕ್ಕಾಗಿ ಬಂದ ಮಹಾ ಸಂಪತ್ತೆಂದು ಭಾವಿಸಿ ಜನ್ಮ ಸಾರ್ಥಕಗೊಳಿಸಿಕೊಳ್ಳುವದು ನಮ್ಮ ಧ್ಯೇಯವಾಗಬೇಕು. …….. ಆದ್ದರಿಂದ ತಾವುಗಳೆಲ್ಲರೂ ಈ ಮಹಾಗ್ರಂಥವನ್ನು ನಮ್ಮ ಸದ್ಗುರುನಾಥನಾದ ಶ್ರೀದತ್ತಪ್ರಭುವೇ, ಶ್ರೀಪಾದವಲ್ಲಭರಾಗಿ ನಮಗೆ ಕರುಣಿಸಿದ್ದಾನೆ ಎಂದು ದೃಢವಾಗಿ ನಂಬಿ ಇದನ್ನು ಅವರ ಪ್ರಸಾದವೆಂದು ಸ್ವೀಕರಿಸಿ, ಅದರಲ್ಲಿರುವ ಗುರು ಮಹಿಮೆಯನ್ನು ಅರಿತು ಧನ್ಯರಾಗಬೇಕೆಂದು ಆಶೀರ್ವದಿಸುತ್ತೇನೆ.
ಇದರಲ್ಲಿ ಫಲಾಫಲಗಳನ್ನು ಗಮನಿಸದೆ, ಅವನನ್ನು ಪಡೆಯಲಿಕ್ಕಾಗಿ, ಅವನ ಅನುಗ್ರಹಕ್ಕಾಗಿಯೇ, ಅದೊಂದೇ ನಮ್ಮ ಗುರಿ ಎಂದು ಭಾವಿಸಿ ಈ ಗ್ರಂಥವನ್ನು ಪಠಿಸಿರಿ. ಏಕೆಂದರೆ ನೀವು ಈಗಾಗಲೇ ಭಗವದ್ಭಕ್ತರಾಗಿಬಿಟ್ಟಿದ್ದೀರಿ. ಇದರಲ್ಲಿ ಸಂಶಯವೇ ಇಲ್ಲ. ಇದರಲ್ಲಿ ಫಲಾಫಲಗಳ ಕುರಿತಾಗಿ ಅಧ್ಯಾಯ ಅಧ್ಯಾಯಕ್ಕೆ ಇಂತಿಂಥಾ ಫಲಗಳು ದೊರೆಯುತ್ತವೆ ಎಂದು ಹೇಳಿದೆ, ನಿಜ. ಇದು ನಂಬಿಕೆಯನ್ನು ಬರಿಸಿ ಭಕ್ತರನ್ನಾಗಿಸಲು ಫಲಗಳನ್ನು ನೀಡಿ ಈ ಗ್ರಂಥವನ್ನು ಪಠಿಸುವಂತೆ ಮಾಡಿ ನಿಧಾನವಾಗಿ ತನ್ನತ್ತ ಸೆಳೆದು ಅವರನ್ನು ಉದ್ಧರಿಸಬೇಕೆಂಬುದೇ ಶ್ರೀಪಾದವಲ್ಲಭರ ಮಹಾ ಮೋಡಿಯಾಗಿದೆ.
ಆದ್ದರಿಂದ ನಿಮಗೆ ಆ ಮೋಡಿಯ ಅವಶ್ಯಕತೆಯೇ ಇಲ್ಲ. ಈಗಾಗಲೇ ನೀವೇ ಅವನನ್ನು ನಿಮ್ಮತ್ತ ಸೆಳೆದುಕೊಂಡು ಬಿಟ್ಟಿದ್ದೀರಿ. ಇದು ಸತ್ಯ. ಧೃತಿಗೆಡಬೇಡಿ. ಧೈರ್ಯಗೆಡಬೇಡಿ. ಈ ಜನ್ಮಕ್ಕೇ ಎಲ್ಲವೂ ಕೊನೆಯಾಗಲಿ. ಜನನ ಮರಣಗಳಿಗೆ ಅಂತ್ಯವನ್ನೇ ಹಾಡಿ ಬಿಡೋಣ. ಯಾವುದೂ ಇಲ್ಲಿ ಇರುವದಕ್ಕೆ ಬಂದಿಲ್ಲ. ಬರುವದೆಲ್ಲವೂ ಬರಲಿ, ಹೋಗುವದೆಲ್ಲವೂ ಹೋಗಲಿ, ಗುರುವೇ ನಿನ್ನ ಅನುಗ್ರಹಕ್ಕಾಗಿ ಎಂದು, ನಿನ್ನನ್ನು ಪಡೆಯುವದಕ್ಕಿಂತಾ ಮಹತ್ವವಾದದ್ದು ಬೇರೊಂದಿಲ್ಲ, ಎಂದು ಅವನನ್ನು ಧ್ಯಾನಿಸುತ್ತಾ, ಸ್ತುತಿಸುತ್ತಾ, ಸೇವಿಸುತ್ತಾ ಸ್ವಯಂಭೂ ಶ್ರೀಪಾದ ಶ್ರೀವಲ್ಲಭನೆಡೆಗೆ ಧಾವಿಸಿರಿ. ನಿಮಗೆ ಶ್ರೇಯಸ್ಸಾಗಲಿ, ನಿಮಗೆ ಮಂಗಳವಾಗಲಿ, ಆ ‘ಘನ ಸಾಯುಜ್ಯ’ಕ್ಕಾಗಿ ಸಜ್ಜಾಗಿರಿ, ಎಂದು ಆಶೀರ್ವದಿಸುತ್ತಾ ಸೂಕ್ಷ್ಮವಾಗುತ್ತೇನೆ’ - ಶ್ರೀ ಸತ್ ಉಪಾಸಿ
ಶ್ರೀಪಾದ ರಾಜಂ ಶರಣಂ ಪ್ರಪದ್ಯೇ
ಜಯವಾಗಲಿ ಜಯವಾಗಲಿ ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ
👍6
ನಿಮೆಲ್ಲಾರ ಸುಸಂಕಲ್ಪವು ಸುಸಂಗತವಾಗಿ ಸಂಪನ್ನವಾಗಿರುವ ಈ ಸಮಯದಲ್ಲಿ, ಅದೇ ಕಾರಣವಾಗಿ ನಮ್ಮಿಂದಲೂ ಅನಾಯಾಸವಾಗಿ ಆದ ಗುರು ಚರಿತ್ರದ ಮರು ಪಠಣ - ಪ್ರಸಾರದ ಸುಯೋಗವನ್ನೂ ಸ್ಮರಿಸುತ್ತ, ಶ್ರೀ ಶ್ರೀಪಾದ ವಲ್ಲಭರು ಸರ್ವರಿಗೂ ಸನ್ಮಂಗಲವನ್ನೇ ಸುರಿಸಲೆಂದು ಬೇಡಿಕೊಳ್ಳುತ್ತಿದ್ದೇನೆ.
ದಿಗಂಬರಾ ದಿಗಂಬರಾ ಶ್ರೀಪಾದ ವಲ್ಲಭ ದಿಗಂಬರಾ

ಪ್ರಭಾ ಭಟ್, ಪುಣೆ
👍4👏3
೩. ಗುರು ದತ್ತಾತ್ರೇಯ, ಶ್ರೀ ಶ್ರೀಪಾದ ಶ್ರೀವಲ್ಲಭರಾಯರು, ಶ್ರೀ ಸದ್ಗುರು ಭಗವಾನ ಶ್ರೀಧರ ಸ್ವಾಮಿಗಳು ತಮ್ಮ ಮಹಾನ್ ಕಾರ್ಯಕ್ಕೆ ಸದ್ಗುರು ಸಜ್ಜನಗಡ ರಾಮಸ್ವಾಮಿಗಳನ್ನು ಸಕಲ ರೀತಿಯಿಂದ ಅಣಿಮಾಡಿ ತಮ್ಮ ಲೀಲಾನಾಟಕವನ್ನು ಜಗದ ರಂಗಮಂಚದಲ್ಲಿ ಆಡಿ ತೋರಿಸಿದರು!

ಆ ಜಗನ್ನಿಯಾಮಕನ ಭುವಿಯ ಮೇಲಿನ ಮಹತ್ಕಾರ್ಯ ನಿರ್ವಹಿಸಲು ತಕ್ಕ ಘಟನಾಕ್ರಮ ಪ್ರಕೃತಿಯಲ್ಲಿ ನಡೆಯಹತ್ತಿತು.
ಇಸವಿ ಸನ ೧೯೨೫ರಲ್ಲಿ ಕರ್ನಾಟಕದ ಶಿವಮೊಗ್ಗಾದಲ್ಲಿ ಶ್ರೀ ಮಲ್ಲಾರಪ್ಪ ಮತ್ತು ಶ್ರೀಮತಿ ಪದ್ಮಾವತಮ್ಮ ಸಾತ್ವಿಕ ದಂಪತಿಗಳಿಗೆ ಕಾರ್ತೀಕ ಶುದ್ಧ ದಶಮಿಯಂದು ಒಂದು ಗಂಡು ಮಗು ಜನಿಸಿತು. ಇವರೇ ರಾಮಸ್ವಾಮಿಗಳು. ಮುಂದೆ ಇವರೇ, ಸದ್ಗುರು ಭಗವಾನ ಶ್ರೀಧರ ಸ್ವಾಮಿಗಳ ಶಿಷ್ಯರಾಗಿ, ಸದ್ಗುರು ಸಜ್ಜನಗಡ ರಾಮಸ್ವಾಮಿಯೆಂದು ಪ್ರಖ್ಯಾತರಾಗಿ, ಮರೆವಿಗೆ ಬಿದ್ದ ಪೀಠಾಪುರ - ಶ್ರೀಪಾದ ಶ್ರೀವಲ್ಲಭರ ಜನ್ಮಸ್ಥಾನವನ್ನು ಅಭಿವೃದ್ಧಿಗೊಳಿಸಿದರು. ಅದೇ ಕ್ಷೇತ್ರ ಪೀಠಿಕಾಪುರ ಇಂದು, ಶ್ರೀ ಶ್ರೀಪಾದರಾಯರ ಚರಿತ್ರೆಯಲ್ಲಿ ಬಂದ ಭವಿಷ್ಯವಾಣಿಯಂತೆ ‘ಇರುವೆಯ ಸಾಲಿನಂತೆ’ ಎಲ್ಲೆಡೆಯಿಂದ ಬಂದ ದರ್ಶನಾರ್ಥಿಗಳಿಂದ ತುಂಬಿ ತುಳುಕುತ್ತಿದೆ.
ಬಾಲ ರಾಮಸ್ವಾಮಿಯವರು, ತಮ್ಮ ಬಾಲ್ಯಕಾಲದಲ್ಲಿಯೇ ಪೂಜೆ-ಭಜನೆಗಳಲ್ಲಿ ಯಾವಾಗಲೂ ಮಗ್ನರಾಗಿರುತ್ತಿದ್ದರು; ಪುರಾಣ-ಪುಣ್ಯಕಥೆಗಳನ್ನು ಆಸಕ್ತಿಯಿಂದ ಕೇಳುತ್ತಿದ್ದರು; ರಾಮಭಕ್ತಿಯಂತೂ ಅತ್ಯಂತ ಪ್ರಖರವಾಗಿತ್ತು. ತಮ್ಮ ೧೬ನೇ ವರ್ಷದೊಳಗೆ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಕಿಶೋರ ರಾಮಸ್ವಾಮಿ, ತಮ್ಮ ಅಜ್ಜಿಯ ಮನೆಯಲ್ಲಿದ್ದು, ಮಾವನ ಬಟ್ಟೆಯಂಗಡಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾಗಲೂ, ವಿದ್ಯಾಭ್ಯಾಸ ಮುಂದುವರಿಸುತ್ತ, ಆಧ್ಯಾತ್ಮ ಸಾಧನೆಯನ್ನು ಇನ್ನೂ ತೀವ್ರಗೊಳಿಸಿದರು. ಪೂಜಾಗುರು ಅನಂತರಾಮ ಅಯ್ಯಂಗಾರರಿಂದ ರಾಮತಾರಕ ಮಂತ್ರೋಪದೇಶ ಪಡೆದು ಜಪ-ಧ್ಯಾನದಲ್ಲಿಯೇ ಮುಳುಗಿರುತ್ತಿದ್ದರು. ದೈಹಿಕ ವ್ಯಾಯಾಮದಲ್ಲಿ ನಿಪುಣತೆ ಪಡೆದದ್ದಲ್ಲದೇ, ಮೈಸೂರಿನ ಶ್ರೀ ಕೃಷ್ಣಮಾಚಾರಿ, ಯೋಗಾಚಾರ್ಯರು ಶಿವಮೊಗ್ಗಾದಲ್ಲಿದ್ದಾಗ ಅವರಿಂದ ಯೋಗಾಸನ, ಪ್ರಾಣಾಯಾಮಗಳನ್ನು ಅಭ್ಯಸಿಸಿದರು. ಹೊಳೇ ನರಸಿಂಹಪುರದ ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳಿಂದ ಅಧ್ಯಾತ್ಮ ವಿಷಯದಲ್ಲಿ ಮಾರ್ಗದರ್ಶನ ಪಡೆದು ತಮ್ಮ ಸಾಧನಾಮಾರ್ಗದಲ್ಲಿಯ ಶಂಕೆಗಳಿಗೆ ಸಮಾಧಾನ ಪಡೆಯುತ್ತಿದ್ದರು.
ತಮ್ಮ ಸದ್ಗುರುವಿನ ದರ್ಶನದ ತಳಮಳದಿಂದ ಅನೇಕ ಸಾಧು-ಸಂತರ ಸನ್ನಿಧಿಗೆ ಹೋಗುತ್ತಿದ್ದರು. ಆದರೂ ಮನಸ್ಸಿಗೆ ಸಮಾಧಾನ ಸಿಕ್ಕಿರಲಿಲ್ಲ.
ಹೀಗಿರುವಾಗ, ಇಸವಿ ಸನ ೧೯೪೮ರಲ್ಲಿ ಬ್ರಹ್ಮಚಾರಿ ರಾಮಸ್ವಾಮಿಗಳು ಸಾಗರದ ಹತ್ತಿರದ ಹಳ್ಳಿಯೊಂದರಲ್ಲಿ ಶ್ರೀ ಸದ್ಗುರು ಶ್ರೀಧರ ಸ್ವಾಮಿಗಳ ದರ್ಶನ ಮಾಡಿದರು. ದರ್ಶನ ಮಾತ್ರದಿಂದಲೇ ರಾಮಸ್ವಾಮಿಯವರ ಮನಸ್ಸು ಶಾಂತವಾಯಿತು. ಹೇಳಲಾರದ ಆನಂದದ ಅನುಭವವಾಯಿತು. ಶ್ರೀ ಶ್ರೀಧರ ಸ್ವಾಮಿಗಳು ‘ತಮ್ಮಾ ನಿನಗೆ ಏನು ಬೇಕು?’ ಎಂದು ಕೇಳಿದಾಗ, ರಾಮಸ್ವಾಮಿಯವರು ‘ನನಗೆ ಆತ್ಮಜ್ಞಾನ ಬೇಕು’ ಎಂದುತ್ತರಿಸಲು, ಶ್ರೀ ಶ್ರೀಧರ ಸ್ವಾಮಿಗಳು ‘ನಿನಗೆ ಆತ್ಮಜ್ಞಾನ ಬೇಕೇ?’ ಎಂದು ಮತ್ತೊಮ್ಮೆ ಕೇಳಿದಾಗ, ರಾಮಸ್ವಾಮಿಯವರೆಂದರು ‘ಹೌದು, ಅದೊಂದೇ ನನಗೆ ಬೇಕು’. ಆಗ ಸ್ವಾಮಿಗಳು ಆಶೀರ್ವದಿಸುತ್ತ ಹೇಳಿದರು ‘ಖಂಡಿತ ನಿನಗೆ ಸಿಗುತ್ತದೆ’. ಆ ವಚನ ಕೇಳುತ್ತಿದ್ದಂತೆಯೇ, ದೇವರೇ ಸಿಕ್ಕಂತೆ, ಆನಂದ ಸಾಗರದ ಅಲೆ ರಾಮಸ್ವಾಮಿಗಳನ್ನು ಮೈ-ಮನಗಳನ್ನು ಆವರಿಸಿತು. ಶ್ರೀ ಶ್ರೀಧರ ಸ್ವಾಮಿಗಳು, ರಾಮಸ್ವಾಮಿಗಳ ಸಾಷ್ಟಾಂಗ ನಮಸ್ಕಾರಕ್ಕೆ ಬಾಗಿದ ಬೆನ್ನಿನ ಮೇಲೆ ತಮ್ಮ ಕೈಯನ್ನಿಟ್ಟು ಆಶೀರ್ವದಿಸಿದಾಗ, ದೈವಿಕ ತೇಜಸ್ಸಿನ ಶಕ್ತಿ ರಾಮಸ್ವಾಮಿಗಳ ದೇಹದಲ್ಲಿ ಹೊಕ್ಕ ಅನುಭವವಾಯಿತು.
ನಂತರ, ಶೀಗೇಹಳ್ಳಿಯಲ್ಲಿ ಸ್ವಾಮಿಗಳಿಂದ ಶಿಷ್ಯತ್ವವನ್ನು ಸ್ವೀಕರಿಸಿ, ರಾಮ ಮಂತ್ರದ ಉಪದೇಶ ಪಡೆದು, ಸ್ವಾಮಿಗಳೊಂದಿಗೆ ಸಜ್ಜನಗಡಕ್ಕೆ ಹೋಗಿ, ಗುರ್ವಾಜ್ಞೆಯಂತೆ ಅಲ್ಲಿ ಮೂರು ವರ್ಷ ತಪೋಸಾಧನೆ ಮಾಡಿದರು. ಆವಾಗಿನಿಂದ ಸಜ್ಜನಗಡ ರಾಮಸ್ವಾಮಿ ಎಂದೇ ಗುರುತಿಸಲ್ಪಟ್ಟರು. ಆ ತಪೋಸಾಧನೆಯ ಕಾಲಘಟ್ಟದಲ್ಲಿ ಶ್ರೀ ರಾಮಸ್ವಾಮಿಯವರ ಶಾರೀರಿಕ ಆವಶ್ಯಕತೆಗಳನ್ನು ಕರ್ಕಿ ಗಂಗಕ್ಕ ತನ್ನ ಮಗನೆಂದೇ ನೋಡಿಕೊಂಡರು.
ಶ್ರೀ ಶ್ರೀಧರ ಸ್ವಾಮಿಗಳು ಕುರುಗಡ್ಡೆ - ಕಾಶಿಯ ವಾಸ್ತವ್ಯ ಮುಗಿಸಿ ತಿರುಗಿ ಶಿವಮೊಗ್ಗಾಕ್ಕೆ ಬಂದಾಗ, ಸಜ್ಜನಗಡದಿಂದ ಬಂದು ಶ್ರೀ ರಾಮಸ್ವಾಮಿಯವರು ಸ್ವಾಮಿಗಳ ಸೇವೆಯಲ್ಲಿ ನಿರತರಾದರು. ಸ್ವಾಮಿಗಳೊಂದಿಗೆ ಕರ್ನಾಟಕದಲ್ಲಿ ತಿರುಗುತ್ತಾ ಇರುವಾಗ, ಕೊನೆಗೆ ಸ್ವಾಮಿಗಳೊಂದಿಗೆ ತಿರುಗಿ ಸಜ್ಜನಗಡಕ್ಕೆ ಬಂದರು. ಸಜ್ಜನಗಡದಲ್ಲಿ ಶ್ರೀಧರ ಸ್ವಾಮಿಗಳು ಶ್ರೀ ರಾಮಸ್ವಾಮಿಗಳಿಗೆ ಗುರು ದತ್ತಾತ್ರೇಯನ ಆದೇಶದಂತೆ, ದತ್ತಕ್ಷೇತ್ರ ನರಸೋಬಾವಾಡಿಯಲ್ಲಿ ಏಕಾಂತ ತಪೋಸಾಧನೆ ಮಾಡಲು ಆದೇಶಿಸಿದರು. ಬಾಲ್ಯದಿಂದಲೇ ರಾಮಭಕ್ತಿಯಲ್ಲೇ ಮುಳುಗಿರುವ, ರಾಮಮಂತ್ರ ಸಾಧನೆಯನ್ನೇ ಮಾಡುತ್ತಿರುವ ಸಜ್ಜನಗಡ ಶ್ರೀ ರಾಮಸ್ವಾಮಿಯವರನ್ನು ಗುರು ದತ್ತಾತ್ರೇಯನು ತನ್ನ ಕಾರ್ಯಕ್ಕೆ ಈಗ ಅಣಿ ಮಾಡುತ್ತಿದ್ದನೋ ಏನೋ!
ಗುರ್ವಾಜ್ಞೆಯಂತೆ ಸಜ್ಜನಗಡ ಶ್ರೀ ರಾಮಸ್ವಾಮಿಗಳು ದತ್ತಕ್ಷೇತ್ರ ನರಸೋಬಾವಾಡಿಯಲ್ಲಿ ರಾಮಮಂತ್ರದಿಂದಲೇ ಸಾಧನೆ ಮಾಡುತ್ತ ಆರು ತಿಂಗಳುಗಳನ್ನೇ ಕಳೆದರು.
ಒಂದು ದಿನ ….
ಸಜ್ಜನಗಡ ಶೀ ರಾಮಸ್ವಾಮಿಯವರು ಧ್ಯಾನದಲ್ಲಿ ಕುಳಿತಿದ್ದಾರೆ. ಗರ್ಭಗುಡಿಯಲ್ಲಿ ನರಸಿಂಹ ಸರಸ್ವತಿಯವರ ಪಾದುಕೆಯ ಮೇಲೆ ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳು ಆಸೀನರಾದ ದೃಶ್ಯ ಕಾಣಿಸಿತು. ಗುರ್ವಾನುಗ್ರಹದ ಭಾವ ಮೈ-ಮನವನ್ನು ಆವರಿಸಿತು ಮತ್ತು ನರಸೋಬಾವಾಡಿಯಿಂದ ತಿರು ಹೊರಡಲು ಗುರ್ವಾಜ್ಞೆಯಾಯಿತು. ಇದೇ ಸಂದರ್ಭದಲ್ಲಿ ಅಲ್ಲಿದ್ದ ಮತ್ತೊಬ್ಬ ದತ್ತ ಭಕ್ತ ಶ್ರೀ ದೇವರಾಯ ಕುಲಕರ್ಣಿಯವರ ಪರಿಚಯವಾಗಿ, ಅವರೊಂದಿಗೆ ಹುಬ್ಬಳ್ಳಿಗೆ ಬಂದು, ಕೆಲ ದಿನ ಹೊಳೆನರಸಿಪುರದ ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳ ಪ್ರವಚನಗಳನ್ನು ಕೇಳಿ, ದೇವನಗಿರಿಯಲ್ಲಿ ಕೆಲಕಾಲ ಆಧ್ಯಾತ್ಮಿಕ ಗ್ರಂಥಾಭ್ಯಾಸದಲ್ಲಿ ತೊಡಗಿಸಿಕೊಂಡು, ನಂತರ ವರದಹಳ್ಳಿಗೆ ಶ್ರೀ ಶ್ರೀಧರ ಸ್ವಾಮಿಗಳ ಹತ್ತಿರ ತಿರುಗಿ ಬಂದರು. ಸ್ವಾಮಿಗಳ ಸಾನಿಧ್ಯದಲ್ಲಿ ಸಾಧನೆ ಮುಂದುವರಿಸುತ್ತ, ಆಧ್ಯಾತ್ಮದ ಉನ್ನತ ತತ್ವಗಳ ಬಗ್ಗೆ ಅರಿತುಕೊಂಡರು.
ನಂತರ ಗುರ್ವಾನುಮತಿಯಂತೆ ಬೆಂಗಳೂರು, ದಾವಣಗೆರೆಯಲ್ಲಿ ಪ್ರವಚನ ಕಾರ್ಯಕ್ರಮ ನಡೆಸಿದರು. ಶ್ರೀ ಶ್ರೀಧರಸ್ವಾಮಿಗಳ ಭಕ್ತೆ ಬೆಂಗಳೂರಿನ ಹೊರವಲಯದ ದೇವನಹಳ್ಳಿಯ, ಮಾತೋಶ್ರೀ ಕಮಲಮ್ಮಳು ಶ್ರೀ ರಾಮಸ್ವಾಮಿಗಳನ್ನು ಸ್ವಂತ ಮಗನಂತೆ ನೋಡಿಕೊಂಡದಲ್ಲದೇ, ಶ್ರೀ ರಾಮಸ್ವಾಮಿಗಳನ್ನು ಗುರುಭಾವದಿಂದ ಕೊನೆಯವರೆಗೂ ನೋಡುತ್ತಿದ್ದಳು.
ಶ್ರೀ ಶ್ರೀಧರ ಸ್ವಾಮಿಗಳ ಸಾನಿಧ್ಯದಲ್ಲಿ ಶಿವಮೊಗ್ಗಾ ಮತ್ತು ಹೈದರಾಬಾದದ ಕಾಚಿಗುಡಾದಲ್ಲಿ ಭಕ್ತರು ದತ್ತೋತ್ಸವ ಆಚರಿಸಿದಾಗ ಶ್ರೀ ರಾಮಸ್ವಾಮಿಗಳು ತಾವೂ ಪಾಲ್ಗೊಂಡರು.
ಕಾಚಿಗುಡಾದ ದತ್ತೋತ್ಸವದ ಒಂದು ದಿನ ….
ಶ್ರೀ ಶ್ರೀಧರ ಸ್ವಾಮಿಗಳು ಶ್ರೀ ರಾಮಸ್ವಾಮಿಗಳನ್ನು ತನ್ನ ಬಳಿ ಕರೆಸಿಕೊಂಡು ಹೇಳಿದರು ‘ದತ್ತನ ಸಂಪೂರ್ಣ ಕೃಪೆ ನಿನ್ನ ಮೇಲಿದೆ. ನಾನು ಇದೇ ದತ್ತ ಜಯಂತಿಯ ಸುಮುಹೂರ್ತದಲ್ಲೇ ನಿನಗೆ ದತ್ತೋಪದೇಶವನ್ನು ಕೊಡುತ್ತೇನೆ’ ಎಂದು ದತ್ತ ಮಂತ್ರೋಪದೇಶ ಕೊಟ್ಟು ಹರಸಿದರು. ಇಲ್ಲಿಯವರೆಗೆ ರಾಮಮಂತ್ರದ ಉಪಾಸನೆ ಮಾಡುತ್ತಿದ್ದ ಶ್ರೀ ರಾಮಸ್ವಾಮಿಗಳಿಗೆ ದತ್ತ ಮಂತ್ರೋಪದೇಶ ಅವರ ಮುಂದಿನ ಮಹಾನ ಕಾರ್ಯಕ್ಕೆ ಪೂರ್ವಸಿದ್ಧತೆಯೆನ್ನಬೇಕೇನೋ!
ಇನ್ನೊಂದು ದಿನ ರಾಮಸ್ವಾಮಿಯವರ ಅಧಿಕಾರತ್ವದ ದ್ಯೋತಕವಾಗಿಯೇ ‘ನೀನು ಸ್ವತಂತ್ರ ಆಶ್ರಮವನ್ನೇ ಸ್ಥಾಪಿಸು’ ಎಂಬ ಮಾತು ಶ್ರೀ ಶ್ರೀಧರ ಸ್ವಾಮಿಗಳ ಮುಖದಿಂದ ಬಂತು. ಆದರೂ ಶ್ರೀ ರಾಮಸ್ವಾಮಿಗಳು ಆ ನಿಟ್ಟಿನಲ್ಲಿ ಯೋಚನೆಯನ್ನೂ ಮಾಡದೇ ಗುರುವಾಜ್ಞೆಯನ್ನು ಪಡೆದು ನರಸೋಬಾವಾಡಿಯಲ್ಲಿ, ಕಾಶಿಯ ಮಾತೋಶ್ರೀ ಸಾವಿತ್ರಕ್ಕನ ಸ್ಫೂರ್ತಿನಿವಾಸದಲ್ಲಿ ಮತ್ತು ಸಜ್ಜನಗಡದಲ್ಲಿ ತಮ್ಮ ಸಾಧನೆಯನ್ನು ಮುಂದುವರಿಸಿದರು.
ತನ್ಮಧ್ಯೆ ಇಸವಿ ಸನ ೧೯೬೫ರಲ್ಲಿ, ಮಾತೋಶ್ರೀ ಕಮಲಮ್ಮ ದೇವನಹಳ್ಳಿಯಲ್ಲಿ ‘ಶ್ರೀ ಸಮರ್ಥ ಆಶ್ರಮ’ ಸ್ಥಾಪಿಸಿ, ಸದ್ಗುರು ಸಜ್ಜನಗಡ ರಾಮಸ್ವಾಮಿಗಳನ್ನು ಗುರುಭಾವದಿಂದ ಬೆಂಗಳೂರಿನ ಪ್ರವಚನ ಕಾರ್ಯಕ್ರಮಗಳಿಗೆಂದು ಶ್ರೀ ಸಮರ್ಥ ಆಶ್ರಮದಲ್ಲಿ ಕರೆತಂದು ಉಳಿಸಿಕೊಂಡರು.
ಗುರು ದತ್ತಾತ್ರೇಯ, ಶ್ರೀ ಶ್ರೀಪಾದ ಶ್ರೀವಲ್ಲಭರಾಯರು, ಶ್ರೀ ಸದ್ಗುರು ಭಗವಾನ ಶ್ರೀಧರ ಸ್ವಾಮಿಗಳು ತಮ್ಮ ಮಹಾನ್ ಕಾರ್ಯಕ್ಕೆ ಸದ್ಗುರು ಸಜ್ಜನಗಡ ರಾಮಸ್ವಾಮಿಗಳನ್ನು ಸಕಲ ರೀತಿಯಿಂದ ಅಣಿಮಾಡಿ ತಮ್ಮ ಲೀಲಾನಾಟಕವನ್ನು ಜಗದ ರಂಗಮಂಚದಲ್ಲಿ ಆಡಿ ತೋರಿಸಿದರು!
ಪ್ರಭಾ ಭಟ್ಟ, ಪುಣೆ
(ಮುಂದುವರಿಯುವದು)
👍1
॥ ಶ್ರೀ ದತ್ತ ಸ್ತೋತ್ರಂ (ಘೋರ ಕಷ್ಟೋದ್ಧಾರಣ ಸ್ತೋತ್ರಂ) ॥

ಶ್ರೀಪಾದ ಶ್ರೀವಲ್ಲಭ ತ್ವಂ ಸದೈವ
ಶ್ರೀದತ್ತಾಸ್ಮಾನ್ಪಾಹಿ ದೇವಾಧಿದೇವ |
ಭಾವಗ್ರಾಹ್ಯ ಕ್ಲೇಶಹಾರಿನ್ಸುಕೀರ್ತೇ
ಘೋರಾತ್ಕಷ್ಟಾದುದ್ಧರಾಸ್ಮಾನ್ನಮಸ್ತೇ

ತ್ವಂ ನೋ ಮಾತಾ ತ್ವಂ ಪಿತಾಽಪ್ತೋಽಧಿಪಸ್ತ್ವಂ
ತ್ರಾತಾ ಯೋಗಕ್ಷೇಮಕೃತ್ಸದ್ಗುರುಸ್ತ್ವಮ್ |
ತ್ವಂ ಸರ್ವಸ್ವಂ ನೋ ಪ್ರಭೋ ವಿಶ್ವಮೂರ್ತೇ
ಘೋರಾತ್ಕಷ್ಟಾದುದ್ಧರಾಸ್ಮಾನ್ನಮಸ್ತೇ

ಪಾಪಂ ತಾಪಂ ವ್ಯಾಧಿಮಾಧಿಂ ಚ ದೈನ್ಯಂ
ಭೀತಿಂ ಕ್ಲೇಶಂ ತ್ವಂ ಹರಾಶು ತ್ವದನ್ಯಮ್ |
ತ್ರಾತಾರಂ ನೋ ವೀಕ್ಷ್ಯ ಈಶಾಸ್ತಜೂರ್ತೇ
ಘೋರಾತ್ಕಷ್ಟಾದುದ್ಧರಾಸ್ಮಾನ್ನಮಸ್ತೇ

ನಾನ್ಯಸ್ತ್ರಾತಾ ನಾಽಪಿ ದಾತಾ ನ ಭರ್ತಾ
ತ್ವತ್ತೋ ದೇವ ತ್ವಂ ಶರಣ್ಯೋಽಕಹರ್ತಾ |
ಕುರ್ವಾತ್ರೇಯಾನುಗ್ರಹಂ ಪೂರ್ಣರಾತೇ
ಘೋರಾತ್ಕಷ್ಟಾದುದ್ಧರಾಸ್ಮಾನ್ನಮಸ್ತೇ

ಧರ್ಮೇ ಪ್ರೀತಿಂ ಸನ್ಮತಿಂ ದೇವಭಕ್ತಿಂ
ಸತ್ಸಂಗಾಪ್ತಿಂ ದೇಹಿ ಭುಕ್ತಿಂ ಚ ಮುಕ್ತಿಮ್ |
ಭಾವಾಸಕ್ತಿಂ ಚಾಖಿಲಾನಂದಮೂರ್ತೇ |
ಘೋರಾತ್ಕಷ್ಟಾದುದ್ಧರಾಸ್ಮಾನ್ನಮಸ್ತೇ

ಶ್ಲೋಕಪಂಚಕಮೇತತದ್ಯೋ ಲೋಕಮಂಗಳವರ್ಧನಮ್ |
ಪ್ರಪಠೇನ್ನಿಯತೋ ಭಕ್ತ್ಯಾ ಸ ಶ್ರೀದತ್ತಪ್ರಿಯೋ ಭವೇತ್

ಇತಿ ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀಮದ್ವಾಸುದೇವಾನಂದಸರಸ್ವತೀ ಸ್ವಾಮೀ ವಿರಚಿತಂ ಘೋರಕಷ್ಟೋದ್ಧಾರಣ ಸ್ತೋತ್ರಂ ಸಂಪೂರ್ಣಮ್ ||
👍5